ಹೊಸದಿಗಂತ ವರದಿ, ಕಲಬುರಗಿ:
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಗುಂಡಗುತಿ೯ ಗ್ರಾಮದಲ್ಲಿ ಒಟ್ಟು 4.01ಕೋಟಿ ರೂಪಾಯಿಗಳ ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಂಡು, ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿ ಶುಕ್ರವಾರ ಶಾಸಕ ಪ್ರಿಯಾಂಕ್ ಖಗೆ೯ ಚಾಲನೆ ನೀಡಿದರು.
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ಇನ್ನೂ ಹಲವು ಯೋಜನೆಗಳನ್ನ ಅನುಷ್ಟಾನಕ್ಕೆ ತರಲಿದ್ದೇನೆ ಎಂದರು.
ನಮ್ಮ ಅವಧಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ 22,000 ಎಕರೆಯಲ್ಲಿ ನಿಮ್ಝ್ ಟೆಕ್ಸಟೈಲ್ ಪಾರ್ಕ್, ಪ್ರತ್ಯೇಕ ರೇಲ್ವೆ ವಲಯ ಮುಂತಾದ ಆರ್ಥಿಕ ಸದೃಢತೆ ತರುವ ಯೋಜನೆಗಳನ್ನು ಜಾರಿಗೆ ತಂದಿದ್ದೆವು. ಈ ಎಲ್ಲ ಯೋಜನೆಗಳು ಜಾರಿಗೆ ಬಂದಿದ್ದರೆ ಈ ಭಾಗ ಅಭಿವೃದ್ದಿಯಾಗುತ್ತಿತ್ತು. ಸಾವಿರಾರು ಜನರಿಗೆ ಉದ್ಯೋಗ ದೊರಕುತ್ತಿತ್ತು. ಆದರೆ, ಈ ಸರ್ಕಾರ ನಮ್ಮ ಕನಸಿನ ಯೋಜನೆಗಳನ್ನು ರದ್ದುಗೊಳಿಸಿ ಜನರಿಗೆ ನಿರುದ್ಯೋಗದ ಜೊತೆಗೆ ಸಂಕಷ್ಟಕ್ಕೀಡು ಮಾಡಿದೆ ಎಂದರು.
ಬಿಜೆಪಿ ಸರ್ಕಾರ ರಚನೆಯಾದ ನಂತರ, ಕಲಬುರಗಿ ಜಿಲ್ಲೆಗೆ ಬಂದ ಹಲವಾರು ಪ್ರಮುಖ ಯೋಜನೆಗಳು ವಾಪಸ್ ಹೋಗಿದ್ದರಿಂದ ಜನರ ನಿರೀಕ್ಷೆ ಸುಳ್ಳಾಗಿದೆ. ಜನಪರವಿಲ್ಲದ ಸಂಸದ ಹಾಗೂ ರಾಜ್ಯ ಸರ್ಕಾರ ಜನರ ನಿರೀಕ್ಷೆ ಬುಡಮೇಲು ಮಾಡಿದ್ದಾರೆ.
ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸಿ ಅವರ ಭವಿಷ್ಯ ಉಜ್ವಲವಾಗಿಸಲು ಇರುವ ಅಸ್ತ್ರವೆಂದರೆ ಅದು ಶಿಕ್ಷಣ ಮಾತ್ರ, ಯಾವ ಮಕ್ಕಳು ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಪ್ರತಿಯೊಬ್ಬರು ಅಕ್ಷರಸ್ತರಾಗಬೇಕು, ನಮ್ಮ ಜಿಲ್ಲೆಯ ನಾಯಕರಾಗಿ ಬೆಳೆಯಬೇಕು.
ನಂಜುಂಡಪ್ಪ ವರದಿ ಪ್ರಕಾರ , ಚಿತ್ತಾಪುರ ತಾಲೂಕು ಅತ್ಯಂತ ಹಿಂದುಳಿದ ತಾಲುಕು ಎಂದು ಹೇಳಲಾಗಿದೆ. ಈ ಹಣೆಪಟ್ಟಿಯನ್ನು ಹೋಗಲಾಡಿಸಬೇಕಾದರೆ ಮತ್ತಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ನೀವೆಲ್ಲರೂ ನನ್ನೊಂದಿಗೆ ಕೈ ಜೋಡಿಸಿ, ಎಲ್ಲರೂ ಒಂದಾಗಿ ಅಭಿವೃದ್ದಿಪಡಿಸುವತ್ತ ಗಮನ ಹರಿಸೋಣ ಎಂದರು.
ಕಾಮಗಾರಿಗಳ ವಿವರ
ಪಂಚಾಯತ ರಾಜ್ ಇಂಜಿನೀಯರಿಂಗ್ ವತಿಯಿಂದ ರೂ 19.50 ಲಕ್ಷ ವೆಚ್ಚದಲ್ಲಿ ಗುಂಡಗುರ್ತಿ ಗ್ರಾಮದಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಅಡಿಗಲ್ಲು,
ಪಿಡಬ್ಲೂಡಿ ವತಿಯಿಂದ ರೂ 60.60 ಲಕ್ಷ ವೆಚ್ಚದಲ್ಲಿ ಗುಂಡಗುರ್ತಿ ಕ್ರಾಸ್ ಎಸ್ ಎಚ್ 10 ರಲ್ಲಿರುವ ಬ್ಲಾಕ್ ಸ್ಪಾಟ್ ನಿರ್ಮಾಣಕ್ಕೆ ಅಡಿಗಲ್ಲು,
ಕೆ.ಬಿ.ಜೆ.ಎನ್.ಎಲ್ ವತಿಯಿಂದ ರೂ 164.81 ಲಕ್ಷ ವೆಚ್ಚದಲ್ಲಿ ಗುಂಡಗುರ್ತಿ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸಿಸಿ ರಸ್ತೆ, ಚರಂಡಿ ಸ್ಲಾಬ್ ನಿರ್ಮಾಣಕ್ಕೆ ಅಡಿಗಲ್ಲು,
ಪಿಡಬ್ಲೂಡಿ ವತಿಯಿಂದ ರೂ 76.40 ಲಕ್ಷ ವೆಚ್ಚದಲ್ಲಿ ಟೆಂಗಳಿ ಕ್ರಾಸ್ ಎಸ್ ಎಚ್ 10 ರಲ್ಲಿ ಬ್ಲಾಕ್ ಸ್ಪಾಟ್ ನಿರ್ಮಾಣಕ್ಕೆ ಅಡಿಗಲ್ಲು ಹಾಗೂ
ಪಿಡಬ್ಲೂಡಿ ವತಿಯಿಂದ ರೂ 80 ಲಕ್ಷ ವತಿಯಿಂದ ಗುಂಡಗುರ್ತಿ ಗ್ರಾಮದಲ್ಲಿ ನಿರ್ಮಿಸಲಾಗಿರುವ 8 ಶಾಲೆ ಕೊಠಡಿ, 2 ಶೌಚಾಲಯ ಹಾಗೂ ಆರ್ ಓ ಪ್ಲಾಂಟ್ ಉದ್ಘಾಟನೆ ನೆರವೇರಿಸಿಲಾಯಿತು