ತಾಲೀಬಾನ್‌ ಸರ್ಕಾರಕ್ಕೆ 1 ವರ್ಷ: ಕಾಬೂಲ್‌ ನಲ್ಲಿ ಭರ್ಜರಿ ಸಂಭ್ರಮಾಚರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್
‌ ತಾಲಿಬಾನಿಗರು ಅಫ್ಘಾನಿಸ್ತಾನವನ್ನು ಮರು ವಶಪಡಿಸಿಕೊಂಡು 1 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ನೂರಾರು ತಾಲಿಬಾನ್ ಹೋರಾಟಗಾರರು ಕಾಬೂಲ್‌ನ ಬೀದಿಗಳಲ್ಲಿ ಸೇರಿ ಸರ್ಕಾರದ ಮೊದಲ ವಾರ್ಷಿಕೋತ್ಸವವನ್ನು ಆಚರಿಸಿದರು. ಈ ವೇಳೆ ತೆರೆದ ಪಿಕ್-ಅಪ್ ಟ್ರಕ್‌ಗಳಲ್ಲಿ ಸವಾರಿ ಮಾಡಿ, ಸ್ವಯಂಚಾಲಿತ ಬಂದೂಕುಗಳನ್ನು ಹಿಡಿದುಕೊಂಡು ತಮ್ಮ ಗುಂಪಿನ ಬಿಳಿ ಮತ್ತು ಕಪ್ಪು ಧ್ವಜಗಳನ್ನು ಬೀಸಿ ಸಂಭ್ರಮಿಸಿದರು.
ಅಮೆರಿಕಾದ ವಿರುದ್ಧ ತಾಲಿಬಾನ್ ನಾಯಕರು ತೋರಿದ ಶೌರ್ಯ- ಪರಾಕ್ರಮಗಳ ಸ್ಮರಣಾರ್ಥವಾಗಿ ಭಾರತೀಯ ರಾಯಭಾರ ಕಚೇರಿಗೆ ಸಮೀಪವಿರುವ ಹೈ-ಸೆಕ್ಯುರಿಟಿ ಗ್ರೀನ್ ಝೋನ್‌ನಲ್ಲಿರುವ ಸಭಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಹಲವಾರು ನಾಗರೀಕರು ಭಾಗವಹಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಮಹಿಳೆಯರಿಗೆ ಪ್ರವೇಶವಿರಲಿಲ್ಲ.
ಇವೆಲ್ಲದರ ನಡುವೆ ಮಹಿಳೆಯರ ಒಂದು ಸಣ್ಣ ಗುಂಪು ತಮ್ಮ ಪ್ರತಿಭಟನೆಯನ್ನು ಸೂಚಿಸಲು ಕಾಬೂಲ್‌ನ ಮನೆಯೊಂದರಲ್ಲಿ ರಹಸ್ಯವಾಗಿ ಸಭೆ ನಡದಸಿದರು ಮತ್ತು ತಾಲಿಬಾನ್ ವಿರುದ್ಧ ತಮ್ಮ ಪ್ರತಿರೋಧವನ್ನು ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದರು. ಈ ಗುಂಪು ʼತಾಲಿಬಾನ್ ಮಹಿಳಾ ವಿರೋಧಿʼ ಎಂದು ಖಂಡಿಸಿತಲ್ಲದೇ, ಕಳೆದ ವರ್ಷ ಅಧಿಕಾರದ “ಯೋಜಿತ” ಹಸ್ತಾಂತರಕ್ಕಾಗಿ ಅಮೆರಿಕಾವನ್ನು ದೂಷಿಸಿತು.
ಕಾಬೂಲ್‌ನ ಬೀದಿಗಳಲ್ಲಿ ಹಾಗೂ ಅಹ್ಮದ್ ಷಾ ಮಸ್ಸೌದ್ ಹೆಸರಿನ ಪ್ರಮುಖ ವೃತ್ತದಲ್ಲಿ ಹೋರಾಟಗಾರರು ದಿನವಿಡೀ ಒಟ್ಟುಗೂಡಿದರು. “ನಾವು ಅಮೆರಿಕವನ್ನು ಸೋಲಿಸಿ ನಮ್ಮ ಸ್ವಾತಂತ್ರ್ಯವನ್ನು ಗೆದ್ದಿದ್ದೇವೆ. ಅದನ್ನೇ ನಾವು ಇಲ್ಲಿ ಆಚರಿಸುತ್ತಿದ್ದೇವೆ” ಎಂದು ಕಾಬೂಲ್‌ನ ದಕ್ಷಿಣದಲ್ಲಿರುವ ಲಗ್ಮನ್ ಪ್ರಾಂತ್ಯದ ರಕ್ಷಣಾ ಸಚಿವಾಲಯದ ಅಧಿಕಾರಿ ಅಬ್ದುಲ್ ಕಹರ್ ಅಘಾ ಜನ್ ಹೇಳಿದರು.
ಯುಎಸ್ ರಾಯಭಾರ ಕಚೇರಿಗೆ ಸಮೀಪವಿರುವ ಮಸ್ಸೂದ್ ಸರ್ಕಲ್‌ನಲ್ಲಿ ಸಭೆ ಸೇರುವ ನಿರ್ಧಾರವು ʼತಾಲಿಬಾನ್ ಈಗ ಅಫ್ಘಾನಿಸ್ತಾನವನ್ನು ಆಳುತ್ತಿದೆʼ ಎಂಬ ಸಂದೇಶವಾಗಿದೆ ಎಂದು ಅವರು ಹೇಳಿದರು. “ನಾವು ಅಧಿಕಾರದಲ್ಲಿದ್ದೇವೆ. ಈ ಸ್ಥಳವು ಎಲ್ಲಾ ಆಫ್ಘನ್ನರಿಗೆ ಸೇರಿದೆ. ನಾವು ಇತರ ಮುಜಾಹಿದ್ದೀನ್‌ಗಳು ಮತ್ತು ಅಹ್ಮದ್ ಶಾ ಮಸೂದ್ ಅವರ ಕುಟುಂಬ ಸದಸ್ಯರು ನಮ್ಮೊಂದಿಗೆ ಶಾಂತಿಯಿಂದ ಬದುಕುತ್ತಾರೆ ಎಂದು ಹೇಳಲು ಬಯಸುತ್ತೇವೆ ಎಂದು ಅಘಾ ಜಾನ್ ಹೇಳಿದರು.
ಕೆಲವು ಹೋರಾಟಗಾರರು 2018 ರಲ್ಲಿ ನಿಧನರಾದ ಹಕ್ಕಾನಿ ಗುಂಪಿನ ನಾಯಕ ಜಲಾಲುದ್ದೀನ್ ಹಕ್ಕಾನಿಯ ಪೋಸ್ಟರ್‌ಗಳನ್ನು ಹಿಡಿದಿದ್ದರು. ಅಯ್ಮಾನ್ ಅಲ್ ಜವಾಹಿರಿಯನ್ನು ಕೊಲ್ಲಲು ಕಾಬೂಲ್‌ನಲ್ಲಿ ಇತ್ತೀಚೆಗೆ ಅಮೆರಿಕ ಡ್ರೋನ್ ದಾಳಿ ನಡೆಸಿದ್ದನ್ನು ಈ ವೇಳೆ ಖಂಡಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!