ಕೊಡಗಿನಲ್ಲಿ ʼಆಮೇಲೆ ಬಿಸಿಲುʼ ಎಂದು ಮತಗಟ್ಟೆಗೆ ಧಾವಿಸುತ್ತಿರುವ ಮತದಾರರು

ದಿಗಂತವರದಿ ಮಡಿಕೇರಿ:

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೊಳಪಡುವ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗಿನಿಂದಲೇ ಬಿರುಸಿನ‌ ಮತದಾನ ನಡೆಯಿತು.
ಬೇಸಿಗೆಯಲ್ಲೂ ಕೂಲ್‌ಕೂಲ್‌ ಆಗಿರುತ್ತಿದ್ದ ಕೊಡಗು ಜಿಲ್ಲೆ ಈ ಬಾರಿ ಬಿಸಿಲ ಬೇಗೆಯಿಂದ ಬೆಂಕಿ ಉಂಡೆಯಂತಾಗಿರುವ ಹಿನ್ನೆಲೆಯಲ್ಲಿ ಮತದಾರರು ಬೆಳಗಿನ ತಂಪಾದ ವಾತಾವರಣದಲ್ಲೇ ಮಗಟ್ಟೆಯತ್ತ ಮುಖ ಮಾಡಿದ್ದರು.

ಮತದಾನ ಆರಂಭವಾದ ಎರಡು ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಶೇ.13.5ರಷ್ಟು ಮತ ಚಲಾವಣೆಯಾಗಿತ್ತು. ಕೈಕೊಟ್ಟ ಮತಯಂತ್ರ: ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಟ್ಟಂಗಾಲದ ಮತಗಟ್ಟೆ ಸಂಖ್ಯೆ 158 ರಲ್ಲಿ ಬೆಳಗ್ಗೆ 8 ಮತ ಯಂತ್ರದ ಬ್ಯಾಟರಿ ಕೈಕೊಟ್ಟ ಪರಿಣಾಮವಾಗಿ ಕೆಲಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಳಿಸಲಾಯಿತು. ಬಳಿಕ ಅಧಿಕಾರಿಗಳು ಇದನ್ನು ದುರಸ್ತಿಪಡಿಸಿ ಸುಗಮ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ಹಕ್ಕು ಚಲಾಯಿಸಿದ ಪ್ರಮುಖರು: ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ‌ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ‌ ವರ್ಣಿತ್ ನೇಗಿ, ಉಪ ವಿಭಾಗಾಧಿಕಾರಿ ವಿನಾಯಕ್ ನರ್ವಾಡೆ ಅವರುಗಳು ನಗರದ ತಾಲೂಕು ಪಂಚಾಯತ್ ಕಚೇರಿ ಬಳಿಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಜಿಲ್ಲಾ ಪೊಲೀಸ್ ‌ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ನಗರದ ಸಂತ ಮೈಕೆಲರ ಶಾಲಾ ಆವರಣದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರು ಮಡಿಕೇರಿಯ ಸರಕಾರಿ ಪದವಿಪೂರ್ವ ಕಾಲೇಜು ಮತಗಟ್ಟೆಯಲ್ಲಿ ತಮ್ಮ ಪತ್ನಿ ಕುಂತಿ ಬೋಪಯ್ಯ ಅವರೊಂದಿಗೆ ತಮ್ಮ ಹಕ್ಕು ಚಲಾಯಿಸಿದರೆ, ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಅವರು ತಮ್ಮ ಪುತ್ರನೊಂಂದಿಗೆ ನಗರದ ಮಹದೇವಪೇಟೆಯ ಪುರಸಭಾ ಶಾಲಾ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!