ವಿದ್ಯಾಸಂಸ್ಥೆಯ ಆವರಣದಲ್ಲಿ ಶಸ್ತ್ರಾಸ್ತ್ರ ತರಬೇತಿ ನಡೆದಿಲ್ಲ: ಝರು ಗಣಪತಿ ಸ್ಪಷ್ಟನೆ

ಹೊಸ ದಿಗಂತ ವರದಿ, ಮಡಿಕೇರಿ:

ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ವತಿಯಿಂದ ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾಸಂಸ್ಥೆಯ ಆವರಣದಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರ ತರಬೇತಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿರುವ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಕೆಲವರು ರಾಜಕೀಯ ಲಾಭಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಝರು ಗಣಪತಿ, ಬೇಸಿಗೆ ರಜೆ ಇದ್ದ ಕಾರಣ ವಿದ್ಯಾಸಂಸ್ಥೆಯಲ್ಲಿ ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಲಾಗಿತ್ತು, ಆದರೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಅಥವಾ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಸ್ಥೆಯ ಸಭಾಂಗಣದಲ್ಲಿ ಊಟ ಮತ್ತು ಮಲಗುವ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಹಿಂದೆಯೂ ಜಾತಿ, ಧರ್ಮದ ತಾರತಮ್ಯವಿಲ್ಲದೆ ಹಲವು ಕಾರ್ಯಕ್ರಮಗಳಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದರು.
ಸಭಾ ಕಾರ್ಯಕ್ರಮ ಹೊರತುಪಡಿಸಿ ಇತರ ಚಟುವಟಿಕೆಗಳನ್ನು ಸಂಸ್ಥೆಯ ಹೊರ ಭಾಗದಲ್ಲಿ ನಡೆಸಲಾಗಿದ್ದು, ಶಾಲೆ ಆವರಣದ ಸಂಪೂರ್ಣ ಮಾಹಿತಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾನೂನು ಬಾಹಿರ ಚಟುವಟಿಕೆಗಳು ಇಲ್ಲಿ ನಡೆದಿಲ್ಲ ಎಂದು ತಿಳಿಸಿದರು.
ಕೆಲವರು ಪೊಲೀಸ್ ತನಿಖೆಗಾಗಿ ಒತ್ತಡ ಹೇರುತ್ತಿದ್ದು, ಇದು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಸಾರ್ವಜನಿಕರೇ ಸಂಸ್ಥೆಗೆ ಖದ್ದು ಭೇಟಿ ನೀಡಿ ತನಿಖೆ ನಡೆಸುವಂತೆ ಮನವಿ ಮಾಡಿದರು.

140 ಮಕ್ಕಳಿಗೆ ಉಚಿತ‌ ಶಿಕ್ಷಣ

2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ವಿದ್ಯಾಭ್ಯಾಸದಿಂದ ವಂಚಿತರಾದ ಸುಮಾರು 140 ಮಕ್ಕಳಿಗೆ ಮೂರು ವರ್ಷಗಳ ಕಾಲ ಉಚಿತ ಶಿಕ್ಷಣ, ವಸತಿ ನೀಡುವ ಮೂಲಕ ಅವರ ಬೆಳವಣಿಗೆಗೆ ಸಂಸ್ಥೆ ಶ್ರಮಿಸಿದೆ. ಇಂತಹ ಸೇವಾ ಮನೋಭಾವದ ಸಂಸ್ಥೆಯ ಹೆಸರನ್ನು ಎಳೆದು ತಂದು ತೊಂದರೆ ನೀಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದ ಅವರು, ನಮ್ಮಲ್ಲಿ ಎಲ್ಲಾ ಜಾತಿ, ಧರ್ಮದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದ್ದಾರೆ ಎಂದರು.
ಇಲ್ಲಸಲ್ಲದ ಹೇಳಿಕೆಗಳಿಂದ ಮಕ್ಕಳ ವಿದ್ಯಾಭ್ಯಾಸ ಕುಂಠಿತಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಕೆಲವರ ಒತ್ತಡಕ್ಕೆ ಮಣಿದು ಮೂವರು ಮಕ್ಕಳು ಶಾಲೆಯಿಂದ ಟಿಸಿ ಪಡೆದು ಹೋಗಿದ್ದಾರೆ ಎಂದು ತಿಳಿಸಿದರು.
ನೆನಪಿನ ಕಾಣಿಕೆ: ಇದೇ ಸಂದರ್ಭ ಕಾರ್ಯಕ್ರಮದಲ್ಲಿ ನೀಡಲಾದ ತ್ರಿಶೂಲವನ್ನು ತೋರಿಸಿದ ಝರು ಗಣಪತಿ, ಶಿಬಿರದ ಸಮಾರೋಪ ಸಮಾರಂಭದಲ್ಲಿ ತ್ರಿಶೂಲಗಳನ್ನು ನೆನಪಿನ ಕಾಣಿಕೆಯಾಗಿ ನೀಡಲಾಗಿದೆಯೇ ಹೊರತು ಯಾವುದೇ ರೀತಿಯ ತರಬೇತಿಯನ್ನಲ್ಲ ಎಂದು ಹೇಳಿದರು.
ನಿರ್ದೇಶಕ ಸತೀಶ್ ದೇವಯ್ಯ ಮಾತನಾಡಿ, ಪ್ರತಿಷ್ಠಿತ ವಿದ್ಯಾಸಂಸ್ಥೆಯ ಹೆಸರು ಕೆಡಿಸುವ ಪ್ರಯತ್ನ ಯಾರಿಗೂ ಶೋಭೆ ತರುವುದಿಲ್ಲ. ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿ ಮಕ್ಕಳ ಮನಸ್ಸನ್ನು ಕೆಡಿಸುವುದು ಖಂಡನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಗಾನ ಕಾರ್ಯಪ್ಪ ಹಾಗೂ ಮುಖ್ಯೋಪಾಧ್ಯಾಯಿನಿ ಕುಪ್ಪಂಡ ರೀನಾ ಗಣೇಶ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!