ಅಶಾಂತ ವಿಶ್ವದಲ್ಲಿ ಶಾಂತಿ ಸ್ಥಾಪಿಸಬಲ್ಲ ದೇಶ ಕಟ್ಟೋಣ: ಯುವಶಕ್ತಿಗೆ ಪ್ರಧಾನಿ ಕರೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಂಡುಬರುವ ಅಶಾಂತಿ, ಸಂಘರ್ಷ, ಕ್ಷೋಭೆಗಳು ಜಗತ್ತಿನ ನೆಮ್ಮದಿ ಕೆಡಿಸಿದ್ದು, ಇಂತಹ ಸನ್ನಿವೇಶದಲ್ಲಿ ವಿಶ್ವದಲ್ಲಿ ಶಾಂತಿ ಸ್ಥಾಪಿಸಬಲ್ಲ ಸಾಮರ್ಥ್ಯದ ರಾಷ್ಟ್ರವೊಂದನ್ನು ನಾವು ಕಟ್ಟಬೇಕಾಗಿದೆ. ಇದಕ್ಕಾಗಿ ನಮ್ಮ ತರುಣಶಕ್ತಿ ಮುಂದಾಗಬೇಕಾಗಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ನೀಡಿದ್ದಾರೆ.
ಗುಜರಾತಿನ ವಡೋದರ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಯುವ ಸಮಾವೇಶವೊಂದನ್ನು ವರ್ಚುವಲ್ ಮೂಲಕ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ಭಾರತ ತನ್ನ ಶತಶತಮಾನಗಳ ಶ್ರೇಷ್ಠ ಪರಂಪರೆಯನ್ನು ಉಳಿಸಿಕೊಂಡು ಹೊಸ ಮುನ್ನೋಟದ ಅನನ್ಯತೆಯೊಂದನ್ನು ಸಾಸಬೇಕಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ಜಗತ್ತಿನ ಸಮಸ್ಯೆಗಳಿಗೆ ಭಾರತ ಪರಿಹಾರಗಳನ್ನು ನೀಡಲಾರಂಭಿಸಿದೆ ಎಂದು ಬೊಟ್ಟು ಮಾಡಿದರು.
ಕೊರೋನಾ ಬಿಕ್ಕಟ್ಟಿನ ಸಂದರ್ಭ ವಿಶ್ವಕ್ಕೆ ಕೋವಿಡ್ ಲಸಿಕೆ ಮತ್ತು ಔಷಧಿಗಳನ್ನು ಒದಗಿಸುವಲ್ಲಿಂದ ಆರಂಭಿಸಿ ಪ್ರಕೃತ ವಿಶ್ವದ ಪೂರೈಕೆ ಸರಪಣಿ ಅಸ್ತವ್ಯಸ್ತಗೊಂಡಿರುವ ನಡುವೆಯೂ ಆತ್ಮನಿರ್ಭರ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ದೃಢ ಹೆಜ್ಜೆಗಳನ್ನು ಇಡುತ್ತಿರುವ ಭಾರತ ಈ ನಿಟ್ಟಿನಲ್ಲಿ ನಮ್ಮಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿ ಪ್ರೇರಣೆಯಾಗಬೇಕು. ಜಗತ್ತಿನ ಅಶಾಂತಿ ಮತ್ತು ಸಂಘರ್ಷಗಳಿಗೆ ಅಂತ್ಯ ಹೇಳಿ ವಿಶ್ವದಲ್ಲಿ ಶಾಂತಿ ಸ್ಥಾಪಿಸಬಲ್ಲ ರಾಷ್ಟ್ರವನ್ನು ನಾವು ಕಟ್ಟಬೇಕಾಗಿದೆ. ಇಂದು ವಿಶ್ವಕ್ಕೆ ಭಾರತ ಹೊಸ ಭರವಸೆಯಾಗಿ ಮೂಡಿಬಂದಿದೆ ಎಂಬುದಾಗಿ ಮೋದಿ ಒತ್ತಿ ಹೇಳಿದರು.
ಯೋಗದಿಂದ ಸಾಫ್ಟ್‌ವೇರ್-ಸ್ಪೇಸ್ ವರೆಗೆ ಭಾರತ ವಿಶ್ವಕ್ಕೆ ಆಶಾಕಿರಣ
ಇಂದು ಹವಾಮಾನ ಬದಲಾವಣೆಯಂತಹ ಭಾರೀ ಸವಾಲುಗಳನ್ನು ಎದುರಿಸುತ್ತಿರುವ ವಿಶ್ವಕ್ಕೆ , ಸಾವಿರಾರು ವರ್ಷಗಳ ಸುಸ್ಥಿರ ಬದುಕಿನ ಭಾರತೀಯ ಸಂಸ್ಕೃತಿ -ಪರಂಪರೆಗಳನ್ನು ಆಧರಿಸಿ ಭಾರತ ಪರಿಹಾರ ನೀಡಬಲ್ಲದು. ಇದೇ ರೀತಿ ಯೋಗ ಮತ್ತು ಆಯುರ್ವೇದದ ಮೂಲಕ ಇಡಿ ಮಾನವಜಗತ್ತಿಗೇ ಭಾರತ ಒಳಿತಿನ ಹಾದಿಯನ್ನು ತೋರಿಸಿಕೊಟ್ಟಿದೆ. ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ಇಕೋಸಿಸ್ಟಮ್ ಹೊಂದಿರುವ ದೇಶವಾಗಿ ಭಾರತ ಮೂಡಿಬಂದಿದೆ.ಇದು ದೇಶದ ಯುವಶಕ್ತಿಯ ಸಾಮರ್ಥ್ಯದಿಂದ ಸಾಧ್ಯವಾಗಿದೆ. ಸಾಫ್ಟ್‌ವೇರ್‌ನಿಂದ ಬಾಹ್ಯಾಕಾಶದವರೆಗೆ ವಿಶ್ವಕ್ಕೇ ಹೊಸ ಭರವಸೆಯ ಭವಿಷ್ಯವನ್ನು ನೀಡಬಲ್ಲ ರಾಷ್ಟ್ರ ಭಾರತ ಎಂದು ಮೋದಿಯವರು ನುಡಿದರು. ವಡೋದರಾದ ಕಾರೆಲಿಬಾಗ್‌ನಲ್ಲಿರುವ ಶ್ರೀ ಸ್ವಾಮಿ ನಾರಾಯಣ್ ದೇಗುಲ ಮತ್ತು ಕುಂಡಲ್‌ಧಾಮ್‌ನಲ್ಲಿರುವ ಶ್ರೀ ಸ್ವಾಮಿ ನಾರಾಯಣ ದೇಗುಲಗಳು ಆಯೋಜಿಸಿದ್ದ ಈ ಸಮ್ಮೇಳನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಜನತೆ ಪಾಲ್ಗೊಂಡಿದ್ದರು.

2023ರ ಆ.15ರವರೆಗೆ ನಗದು ಪಾವತಿ ಬಿಟ್ಟು ಡಿಜಿಟಲ್ ಪಾವತಿಗೆ ಕರೆ
ಚಾರಿತ್ರ್ಯವಂತರಾಗಿರಬೇಕು ಎಂಬುದಾಗಿ ನಮ್ಮೆಲ್ಲ ಧರ್ಮಗ್ರಂಥಗಳು ನಮಗೆ ಕಲಿಸಿಕೊಟ್ಟಿದ್ದರಿಂದ ಇದನ್ನೇ ಆಧರಿಸಿ ನಮ್ಮ ಪ್ರತಿ ಪೀಳಿಗೆಯೂ ಬೆಳೆಯುತ್ತಾಬಂದಿದೆ.ಯುವಪೀಳಿಗೆಯಲ್ಲಿ ಉತ್ತಮ ಸಂಸ್ಕಾರ-ಸಂಸ್ಕೃತಿ ತುಂಬಿ ನಮ್ಮ ರಾಷ್ಟ್ರದ ಅನನ್ಯತೆ, ಪ್ರತಿಷ್ಠೆ, ಗೌರವಗಳಿಗೆ ತಕ್ಕಂತಹ ಸಾಧನೆ ಮಾಡಿ ತೋರಿಸಬೇಕಾಗಿದೆ. ಬಡಜನರ ಬದುಕಿನಲ್ಲಿ ಮಾತ್ರವಲ್ಲ, ನಮ್ಮ ನೆರೆಕರೆಯವರಲ್ಲಿ ನಾವು ಭರವಸೆ ತುಂಬಬೇಕಾಗಿರುವುದು ನಮ್ಮ ಕರ್ತವ್ಯ. ಸರಕಾರದ ಯೋಜನೆಯನ್ನು ನಿಮ್ಮ ನೆರೆಯವರು ಪಡೆಯುತ್ತಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಕೂಡಾ ರಾಷ್ಟ್ರನಿರ್ಮಾಣದಲ್ಲಿ ನಿಮ್ಮ ಕೊಡುಗೆಯಾಗುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ನಾವು ದೇಶಕ್ಕಾಗಿ ಮಡಿಯುವ ಅವಕಾಶ ಪಡೆದಿಲ್ಲ. ಆದರೆ ಈಗ ದೇಶಕ್ಕಾಗಿ ಬದುಕುವ ಅವಕಾಶ ಪಡೆದಿದ್ದೇವೆ. ಇದನ್ನು ಬಳಸಿಕೊಳ್ಳೋಣ. 2023ರ ಆ.15ರವರೆಗೆ ಯುವಜನತೆ ನಗದು ಪಾವತಿ ನಿಲ್ಲಿಸಿ ಡಿಜಿಟಲ್ ಪಾವತಿ ಸಂಕಲ್ಪ ಕೈಗೊಳ್ಳಿ. ನಿಮ್ಮ ಈ ಸಣ್ಣ ನಿರ್ಧಾರ ಸಣ್ಣ ಉದ್ಯಮ, ವ್ಯಾಪಾರಿಗಳ ಬದುಕಿಗೆ ಬಹುದೊಡ್ಡ ಕೊಡುಗೆಯಾಗಲಿದೆ. ಇದೇ ರೀತಿ ಸ್ವಚ್ಛತೆ, ಏಕಬಳಕೆ ಪ್ಲಾಸ್ಟಿಕ್ ಖಾತ್ರಿಯೊಂದಿಗೆ ಅಪೌಷ್ಟಿಕತೆ ತಡೆಯಿರಿ ಎಂದು ಯುವಜನತೆಗೆ ಮೋದಿ ಕರೆ ನೀಡಿದರು. ನಾಗಾಲ್ಯಾಂಡಿನಿಂದ ಬಂದ ಹೆಣ್ಣುಮಗಳೊಬ್ಬಳು ಕಾಶಿಗೆ ಬಂದು ಅಲ್ಲಿನ ಘಾಟ್‌ಗಳನ್ನು ಏಕಾಂಗಿಯಾಗಿ ಸ್ವಚ್ಛಗೊಳಿಸಲಾರಂಭಿಸಿದ್ದು, ಬಳಿಕ ಇದು ದೊಡ್ಡ ಅಭಿಯಾನವಾಗಿ ಪರಿವರ್ತನೆಗೊಂಡಿದ್ದನ್ನು ಪ್ರಧಾನಿ ಉಲ್ಲೇಖಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!