ಟಿ 20 ವಿಶ್ವಕಪ್‌ ಗೆ ಮುನ್ನ ಆಸ್ಟ್ರೇಲಿಯಾಕ್ಕೆ ಅಘಾತ: ಭಾರತ ಪ್ರವಾಸದಿಂದ ಹೊರಬಿದ್ದ ಮೂವರು ಸ್ಟಾರ್‌ ಪ್ಲೆಯರ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ತವರಿನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ ಗೆ ಭರ್ಜರಿ ಸಿದ್ಧತೆ ನಡೆಸಿರುವ ಆಸ್ಟ್ರೇಲಿಯಾ ಅದಕ್ಕೂ ಮುನ್ನ  ಭಾರತದಲ್ಲಿ ಮೂರು ಪಂದ್ಯಗಳ T20I ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಬಲಿಷ್ಠ ಭಾರತ ತಂಡವನ್ನು ತವರಿನಲ್ಲೇ ಮಣಿಸಿದರೆ ವಿಶ್ವ ಕಪ್‌ಗೆ ಆತ್ಮವಿಶ್ವಾಸದಿಂದ ಹೋಗಬಹುದು ಎಂಬ ಲೆಕ್ಕಾಚಾರ ಹಾಕಿರುವ ಆಸ್ಟ್ರೇಲಿಯಾ ಈ ಸರಣಿಗೆ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಆದರೆ ಈಗ ಮ್ಯಾನೇಜ್‌ ಮೆಂಟ್‌ ನಿರ್ಧಾರ ಉಲ್ಟಾ ಆಗಿದ್ದು ಮೂವರು ಸ್ಟಾರ್‌ ಆಟಗಾರರು ಸರಣಿಯಿಂದ ಹೊರಬಿದ್ದಿದ್ದಾರೆ. ಅಲ್ಲದೆ, ಟಿ 20 ವಿಶ್ವಕಪ್‌ ಗೂ ಅವರ ಅಲಭ್ಯತೆ ಅಪಾಯ ಕಾಡುತ್ತಿದೆ. ಕ್ರಿಕೆಟ್‌ ಆಸ್ಟ್ರೇಲಿಯಾ ತಂಡದಲ್ಲಿ ಮೂರು ಬದಲಾವಣೆಗಳನ್ನು ಪ್ರಕಟಿಸಿದೆ. ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಮಿಚೆಲ್ ಮಾರ್ಷ್ ಗಾಯದ ಕಾರಣದಿಂದ ಭಾರತ ವಿರುದ್ಧದ ಸರಣಿಯಿಂದ ಹೊರಬಿದ್ದಿದ್ದಾರೆ. ಈಗಾಗಲೇ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ಉದ್ದೇಶದಿಂದ ತಂಡದಿಂದ ಹೊರಗುಳಿದಿದ್ದರು. ಮಾರ್ಷ್‌ಗೆ ಪಾದದ ಗಾಯವಾಗಿದ್ದರೆ, ಸ್ಟೊಯಿನಿಸ್‌ಗೆ ಮೊಣಕೈ ಸಮಸ್ಯೆ ಇದೆ. ವೇಗಿ ಸ್ಟಾರ್ಕ್‌ ಗೆ ಮೊಣಕಾಲಿನ ಗಾಯದ ಸಮಸ್ಯೆ ಕಾಣಿಸಿಕೊಂಡಿದೆ. ಆಟಗಾರರು ಗಂಭೀರವಾಗಿ ಗಾಯಗೊಂಡಿಲ್ಲ. ಮುಂದಿನ ತಿಂಗಳು ವಿಶ್ವಕಪ್‌ಗೆ ಮುನ್ನ ನಡೆಯಲಿರುವ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯ ವೇಳೆಗೆ ಈ ಮೂವರು ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಆಭರತ ಪ್ರವಾಸದ ತಂಡದಿಂದ ಕೈಬಿಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಹೇಳಿದೆ. ಗಾಯಗೊಂಡ ಆಟಗಾರರ ಸ್ಥಾನವನ್ನು ನಾಥನ್ ಎಲ್ಲಿಸ್, ಡೇನಿಯಲ್ ಸ್ಯಾಮ್ಸ್ ಮತ್ತು ಸೀನ್ ಅಬಾಟ್ ತುಂಬಲಿದ್ದಾರೆ.
ಭಾರತ ವಿರುದ್ಧದ ಮೂರು ಪಂದ್ಯಗಳ ಟಿ 20 ಸರಣಿಯು ಸೆಪ್ಟೆಂಬರ್ 20 ರಿಂದ ಮೊಹಾಲಿಯಲ್ಲಿ ಪ್ರಾರಂಭವಾಗುತ್ತದೆ. ಸೆಪ್ಟೆಂಬರ್ 23 ರಂದು ಎರಡನೇ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ. ಮೂರನೇ ಮತ್ತು ಅಂತಿಮ ಪಂದ್ಯವು ಸೆಪ್ಟೆಂಬರ್ 25 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.
ಅಕ್ಟೋಬರ್ 22 ರಂದು ಸಿಡ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ತನ್ನ ವಿಶ್ವಕಪ್‌  ಪ್ರಶಸ್ತಿ ಉಳಿಸಿಕೊಳ್ಳಲು ಅಭಿಯಾನವನ್ನು ಪ್ರಾರಂಭಿಸಲಿದೆ.
ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾದ ಪರಿಷ್ಕೃತ ತಂಡ: ಸೀನ್ ಅಬಾಟ್, ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಆರನ್ ಫಿಂಚ್ (ಸಿ), ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್‌ಸನ್, ಡೇನಿಯಲ್ ಸ್ಯಾಮ್ಸ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್‌, ಆಡಂ ಝಂಪಾ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!