ಅದೊಂದು ತಪ್ಪಿಗೆ ದೊಡ್ಡ ಬೆಲೆ ತೆತ್ತ ಪಾಕ್; ಟೀಂ ಇಂಡಿಯಾಕ್ಕೆ ವರವಾಗಿ ಪರಿಣಮಿಸಿತು ಐಸಿಸಿ ಹೊಸ ನಿಯಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ‌ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಪಾಕ್‌ ಮಾಡಿದ ತಪ್ಪೊಂದು ನಿರ್ಣಾಯಕ ಹಂತದಲ್ಲಿ ಭಾರತಕ್ಕೆ ವರವಾಗಿ ಪರಿಣಮಿಸಿತು. ಪಾಕಿಸ್ತಾನ ತಂಡವು ನಿಗದಿತ ಸಮಯದಲ್ಲಿ ಕೇವಲ 17 ಓವರ್​ಗಳನ್ನು ಮಾತ್ರವೇ ಪೂರ್ಣಗೊಳಿಸಿತ್ತು. ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಪಾಕಿಸ್ತಾನ ತಂಡಕ್ಕೆ ದಂಡ ವಿಧಿಸಲಾಯಿತು.
ಐಸಿಸಿಯ ಹೊಸ ನಿಯಮದ ಪ್ರಕಾರ, ಬೌಲಿಂಗ್ ತಂಡವು ನಿಗದಿತ ಸಮಯದೊಳಗೆ ತಮ್ಮ ಓವರ್‌ಗಳ ಕೋಟಾವನ್ನು ಪೂರ್ಣಗೊಳಿಸದಿದ್ದರೆ, ಇದಕ್ಕೆ ಶಿಕ್ಷೆಯಾಗಿ ಬೌಂಡರಿ ಲೈನ್​ನಲ್ಲಿರುವ ಒಬ್ಬ ಫೀಲ್ಡರ್ ನನ್ನು 30 ಯಾರ್ಡ್​ ಸರ್ಕಲ್​ನೊಳಗೆ ನಿಲ್ಲಿಸಬೇಕಾಗುತ್ತದೆ. ಇದರಿಂದ ಬೌಂಡರಿ ಲೈನ್‌ ಕಾಯುತ್ತಿರುವ ಫೀಲ್ಡರ್ ಗಳ ಸಂಖ್ಯೆ ಕಡಿಮೆಯಾಗುತ್ತದೆ.
ಪಾಕ್‌ ತಂಡ ಸಹ ಇದೇ ತಪ್ಪನ್ನು ಮಾಡಿತ್ತು. ಪಾಕ್‌ ಭಾರತದ ಇನ್ನಿಂಗ್ಸ್‌ನ ಅಂತಿಮ ಮೂರು ಓವರ್‌ ಗಳನ್ನು ಬೌಂಡರಿ ಲೈನ್‌ ನಲ್ಲಿ ಓರ್ವ ಫೀಲ್ಡರ್‌ನ ಕೊರತೆಯೊಂದಿಗೆ ಆಡಬೇಕಾಗಿ ಬಂತು. ಆ ಸಮಯದಲ್ಲಿ ಭಾರತಕ್ಕೆ 18 ಎಸೆತಗಳಲ್ಲಿ ಗೆಲ್ಲಲು 32 ರನ್‌ಗಳ ಅಗತ್ಯವಿತ್ತು. ನಸೀಮ್ ಷಾ ಎಸೆದ 18ನೇ ಓವರ್ ನಲ್ಲಿ ರವೀಂದ್ರ ಜಡೇಜಾ ಕವರ್ ಮತ್ತು ಮಿಡ್-ಆಫ್ ನಡುವೆ ಬೌಂಡರಿ ಹೊಡೆಯುವ ಮೂಲಕ ಈ ಪರಿಸ್ಥಿತಿಯ ಲಾಭ ಪಡೆದರು.
12 ಎಸೆತಗಳಲ್ಲಿ 21 ರನ್‌ಗಳ ಅಗತ್ಯವಿದ್ದಾಗ, ಹಾರ್ದಿಕ್ ಪಾಂಡ್ಯ 19ನೇ ಓವರ್‌ನಲ್ಲಿ ಹ್ಯಾರಿಸ್ ರೌಫ್ ಅವರಿಗೆ 3 ಬೌಂಡರಿಗಳನ್ನು ಸಿಡಿಸಿದರು. ಮತ್ತು ಕೊನೆಯ ಓವರ್‌ನ ಸಮೀಕರಣವನ್ನು ಏಳು ರನ್‌ಗಳಿಗೆ ಇಳಿಸಿದರು. ಕೊನೆಯಲ್ಲಿ ಸಿಕ್ಸರ್‌ ಸಿಡಿಸಿ ಪಂದ್ಯವನ್ನು ಮುಗಿಸಿದರು. ಟೀಮ್ ಇಂಡಿಯಾ ಕೊನೆಯ 3 ಓವರ್​ಗಳಲ್ಲಿ 32 ರನ್​ ಬಾರಿಸುವ ಮೂಲಕ ರೋಚಕ ಜಯವನ್ನು ತನ್ನದಾಗಿಸಿಕೊಂಡಿತು.
ಸ್ಲೋ ಓವರ್ ರೇಟ್‌ಗೆ ಪೆನಾಲ್ಟಿಗೆ ಸಂಬಂಧಿಸಿದಂತೆ ICC ಯ ಹೊಸ ನಿಯಮಗಳು ಜನವರಿ 16, 2022 ರಿಂದ ಜಾರಿಗೆ ಬಂದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!