ಪಂದ್ಯ ರೋಚಕ ಘಟ್ಟದಲ್ಲಿದ್ದಾಗ ಹಾರ್ದಿಕ್‌ ಪಾಂಡ್ಯಾ ಹೇಳಿದ್ದ ವಿಚಾರ ಬಹಿರಂಗಪಡಿಸಿದ ರವೀಂದ್ರ ಜಡೇಜಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಯುಎಇಯ ದುಬೈ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಕೊನೆಯ ಓವರ್‌ ನಲ್ಲಿ ಗೆಲುವು ದಾಖಲಿಸಿದ ಭಾರತ ತನ್ನ ಏಷ್ಯಾ ಕಪ್ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದೆ. 148 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಹಾರ್ದಿಕ್ ಅಬ್ಬರದ ಬಲದಿಂದ 5 ವಿಕೆಟ್‌ಗಳ ಜಯ ದಾಖಲಿಸಿತು.
ಪಾಕಿಸ್ತಾನ ನೀಡಿದ 148 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ 14 ಓವರ್‌ ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 89 ರನ್‌ ಕಲೆಹಾಕಿ ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಜೊತೆಯಾದ ಹಾರ್ದಿಕ್‌ ಪಾಂಡ್ಯ ( 33*, 17 ಎಸೆತ) ಹಾಗೂ ರವೀಂದ್ರ ಜಡೇಜಾ ಭಾರತವನ್ನು ಗೆಲುವಿನಂಚಿಗೆ ಕೊಂಡೊಯ್ದರು. ಕೊನೆಯ ಓವರ್‌ ನಲ್ಲಿ ಗೆಲುವಿಗೆ 7 ರನ್‌ ಬೇಕಿದ್ದಾಗ ಜಡೇಜಾ 20ನೇ ಓವರ್‌ ನ ಮೊದಲ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಇದರಿಂದ ಅಭಿಮಾನಿಗಳು ಆತಂಕಕ್ಕೆ ಒಳಗಾದರು. ಓವರ್‌ ನ 4ನೇ ಎಸೆತವನ್ನು ಭರ್ಜರಿ ಸಿಕ್ಸರ್‌ ಗಟ್ಟಿದ ಹಾರ್ದಿಕ್‌ ಪಾಂಡ್ಯಾ ಟೀಂ ಇಂಡಿಯಾಕ್ಕೆ ಅಭೂತಪೂರ್ವ ಗೆಲುವು ತಂದುಕೊಟ್ಟರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ರವೀಂದ್ರ ಜಡೇಜಾ ಪಂದ್ಯ ರೋಚಕ ಘಟ್ಟದಲ್ಲಿ ಸಾಗುತ್ತಿದ್ದಾಗ ತನ್ನ ಹಾಗೂ ಹಾರ್ದಿಕ್‌ ಪಾಂಡ್ಯ ನಡುವೆ ನಡೆದ ಮಾತುಕತೆಯನ್ನು ಬಹಿರಂಗಪಡಿಸಿದ್ದಾರೆ.
“ನಾವು ಪಂದ್ಯದ ಕೊನೆಯವರೆಗೂ ಆಡಲು ಬಯಸಿದ್ದೇವು. ಅವರು ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿದ್ದಾರೆ, ಅವರ ವೇಗದ ಬೌಲರ್‌ಗಳು ಸುಲಭವಾಗಿ ರನ್‌ ನೀಡುವುದಿಲ್ಲ ಎಂಬ ವಿಚಾರ ನಮಗೆ ತಿಳಿದಿತ್ತು. ಆದ್ದರಿಂದ ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಎಚ್ಚರಿಕೆಯಿಂದ ಇನ್ನಿಂಗ್ಸ್‌ ಬೆಳೆಸಿದೆವು. ನಾನು ಆಟವನ್ನು ಮುಗಿಸಬಹುದಿತ್ತು. ಆ ಹಂತದಲ್ಲಿ ಔಟ್‌ ಆಗಿದ್ದು ಬೇಸರ ಮೂಡಿಸಿತು. ಆದರೆ ಹಾರ್ದಿಕ್ ಪಂದ್ಯದ ನಿರ್ಣಾಯಕ ಸಂದರ್ಭದಲ್ಲಿ ಅದ್ಭುತವಾಗಿ ಆಡಿದರು ಎಂದು ಜಡೇಜಾ ಮೆಚ್ಚುಗೆ ಸೂಚಿಸಿದರು.
” ಪಂದ್ಯ ಕೊನೆಯ ಹಂತಕ್ಕೆ ಸಾಗಿದಾಗ ಪಾಂಡ್ಯ ತಾನು ಬಿಗ್‌ ಶಾಟ್‌ಗಳತ್ತ ಹೋಗುವುದಾಗಿ ಹೇಳಿದರು. ಹೇಳಿದಂತೆಯೇ 19ನೇ ಓವರ್‌ ನಲ್ಲಿ 3 ಬೌಂಡರಿಗಳನ್ನು ಸಿಡಿಸಿ ಒತ್ತಡವನ್ನು ಕಡಿಮೆ ಮಾಡಿದರು. ಅವರು ಕೊನೆಯವರೆಗೂ ಉಳಿದು ತಂಡವನ್ನು ಗೆಲ್ಲಿಸಿದ್ದಕ್ಕೆ ಸಂತೋಷವಾಗಿದೆ” ಎಂದು ಜಡೇಜಾ ಹಾರ್ದಿಕ್ ಪಾಂಡ್ಯಾರ ಮ್ಯಾಚ್‌ ವಿನ್ನಿಂಗ್ ಇನ್ನಿಂಗ್ಸ್‌ನ ಬಗ್ಗೆ ಹೇಳಿದ್ದಾರೆ.
ಪಾಂಡ್ಯ ತಮ್ಮ ಗುರಿಯ ಬಗ್ಗೆ ದೃಢವಾಗಿದ್ದರು. ಅದ್ಭುತವಾದ ಹೊಡೆತಗಳಿಂದ ಪಂದ್ಯದ ಫಲಿತಾಂಶವನ್ನು ಬದಲಿಸಿದರು. ಚೆಂಡು ಮೇಲಿಂದ ಮೇಲೆ ಬೌಂಡರಿ ಮೇಲೆ ಸಾಗುವುದನ್ನು ಕಾಣುತ್ತಿತ್ತು ಎಂದು ಸಹ ಆಟಗಾರನ ಕುರಿತು ಮೆಚ್ಚುಗೆ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!