ಹೊಸದಿಗಂತ ಡಿಜಟಲ್ ಡೆಸ್ಕ್
ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ0 ಪಂದ್ಯದಲ್ಲಿ 68 ರನ್ ಗಳ ಭರ್ಜರಿ ಜಯ ಕಂಡಿರುವ ಟೀಂ ಇಂಡಿಯಾ ಇಂದು ಬಾಸ್ಸೆಟೆರೆಯ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿಯೂ ಗೆಲುವಿನ ಓಟ ಮುಂದುವರೆಸಲು ಎದುರು ನೋಡುತ್ತಿದೆ.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಟೀಂ ಇಂಡಿಯಾ ಪ್ರತಿಯೊಂದು ಪಂದ್ಯವನ್ನು ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ನಾಯಕ ರೋಹಿತ್- ಕೋಚ್ ರಾಹುಲ್ ದ್ರಾವಿಡ್ ಹಲವಾರು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧ ವಿಕೆಟ್ ಕೀಪರ್ ರಿಶಭ್ ಪಂತ್ ರನ್ನು ಕಣಕ್ಕಿಳಿಸಿದ್ದ ಟೀಮ್ ಮ್ಯಾನೇಜ್ ಮೆಂಟ್, ವಿಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್‌ರನ್ನು ಆರಂಭಿಕರನ್ನಾಗಿ ಕಳುಹಿಸಿ ಅಚ್ಚರಿ ಮೂಡಿಸಿತ್ತು. ತಂಡದ ಖಾಯಂ ಓಪನರ್ ಗಳಾದ ರೋಹಿತ್ ಅಥವಾ ಕೆ.ಎಲ್ ರಾಹುಲ್ ವಿಶ್ವಕಪ್ ವೇಳೆಗೆ ಫಿಟ್ ಇರದಿದ್ದರೆ- ಗಾಯಗೊಂಡರೆ ಬದಲಿ ಆಯ್ಕೆಗಳನ್ನು ತಂಡ ಈಗಿನಿಂದಲೇ ಹುಡುಕುತ್ತಿರುವುದು ಸ್ಪಷ್ಟ. ಸದ್ಯಕ್ಕೆ ಕೆಎಲ್ ರಾಹುಲ್ ಲಭ್ಯರಿಲ್ಲದ ಕಾರಣ ತಂಡದ ಮ್ಯಾನೇಜ್‌ಮೆಂಟ್ ತನ್ನ ಪ್ರಯೋಗವನ್ನು ಮುಂದುವರಿಸುತ್ತದೆಯೇ ಎಂಬುದು ಕುತೂಹಲಕಾರಿಯಾಗಿದೆ. ಟಿ.20ಯಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಶ್ರೇಯಸ್ ಐಯ್ಯರ್ ರನ್ನು ಕೈಬಿಟ್ಟು ದೀಪಕರ್ ಹೂಡಾ ಅಥವಾ ಸಂಜು ಸ್ಯಾಮ್ಸನ್ ರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ.
ಮತ್ತೊಮ್ಮೆ ಫಿನಿಶರ್ ಪಾತ್ರವನ್ನು (19 ಎಸೆತಗಳಲ್ಲಿ 41) ನಿರ್ವಹಿಸಿದ್ದ ದಿನೇಶ್ ಕಾರ್ತಿಕ್ ವಿಶ್ವಕಪ್ ಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಾ ಸಾಗಿದ್ದಾರೆ. ಹಾರ್ದಿಕ್ ರಿಂದ ತಂಡ ಉತ್ತಮ ಪ್ರದರ್ಶನ ಎದುರು ನೋಡುತ್ತಿದೆ.
ಮೊದಲ ಪಂದ್ಯದಲ್ಲಿ ಹರ್ಷಲ್ ಪಟೇಲ್ ಸ್ಥಾನದಲ್ಲಿ ಮೂವರು ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಮತ್ತು ರವಿ ಬಿಷ್ಣೋಯ್ ಅವರನ್ನು ಕಣಕ್ಕಿಳಿಸುವವ ಮೂಲಕ ರೋಹಿತ್ ಶರ್ಮಾ ಮೊತ್ತೊಂದು ಪ್ರಯೋಗ ನಡೆಸಿದ್ದು ವರ್ಕೌಟ್ ಆಗಿತ್ತು.
ಅರ್ಷದೀಪ್ ಸಿಂಗ್ ಗೆ ಹೆಚ್ಚಿನ ಅವಕಾಶ:
ಇತ್ತಿಚಿನ ವರ್ಷಗಳಲ್ಲಿ ಭಾರತ ಗುಣಮಟ್ಟದ ಎಡಗೈ ವೇಗಿಗಾಗಿ ಹುಡುಕಾಟ ನಡೆಸಿತ್ತು. ಅರ್ಶದೀಪ್ ಸಿಂಗ್ ಈ ಹುಡುಕಾಟವನ್ನು ಕೊನೆಗೊಳಿಸುವ ಭರವಸೆ ಮೂಡಿಸಿದ್ದಾರೆ. 23 ವರ್ಷದ ವೇಗಿ ಮೊದಲ ಪಂದ್ಯದಲ್ಲಿ 4 ಓವರ್ ಗಳಲ್ಲಿ ಕೇವಲ 24 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಸೊಗಸಾದ ಶಾರ್ಟ್ ಬಾಲ್, ಪರಿಪೂರ್ಣ ಯಾರ್ಕರ್ ಎಸೆತಗಳೊಂದಿಗೆ ಅದ್ಭುತವಾಗಿ ಬೌಲಿಂಗ್ ಮಾಡಿರುವ ಅರ್ಶ್‌ದೀಪ್ ಮತ್ತೊಂದು ಅವಕಾಶ ಪಡೆಯಲಿದ್ದಾರೆ. ಮೊದಲ ಪಂದ್ಯದಲ್ಲಿ ಅಶ್ವಿನ್ ಮತ್ತು ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಬಹಳ ಸಮಯದ ನಂತರ ಟಿ 20 ತಂಡಕ್ಕೆ ಮರಳಿದ ಅಶ್ವಿನ್ (4 ಓವರ್‌ಗಳಲ್ಲಿ 2/22), ಟಿ20 ಯಲ್ಲಿ ತನ್ನ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ತೋರಿಸಿದ್ದಾರೆ. 21ರ ಹರೆಯದ ಬಿಷ್ಣೋಯ್ (4 ಓವರ್‌ಗಳಲ್ಲಿ 2/26) ದೊಡ್ಡ ಹಂತದಲ್ಲಿ ಉತ್ತಮ ಪ್ರದರ್ಶನ ತೋರಲು ತಾನು ಸಜ್ಜಾಗಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ. ಟೀಂ ಮ್ಯಾನೇಜ್ ಮೆಂಟ್ ಜಡೇಜಾ, ಅಶ್ವಿನ್ ಮತ್ತು ಬಿಷ್ಣೋಯ್ ಅವರನ್ನು ಮುಂದುವರಿಯುತ್ತದೆಯೇ ಅಥವಾ ಅಕ್ಷರ್ ಪಟೇಲ್ ಮತ್ತು ಕುಲ್ದೀಪ್ ಯಾದವ್ ಅವರನ್ನು ಕರೆತರುತ್ತದೆಯೇ ಎಂದು ನೋಡಬೇಕಾಗಿದೆ.
ಸಂಭಾವ್ಯ ತಂಡ:
ಭಾರತ: ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್, ಭುವನೇಶ್ವರ್ ಕುಮಾರ್
ವೆಸ್ಟ್ ಇಂಡೀಸ್: ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ಕ್ಯಾಪ್ಟನ್), ರೋವ್‌ಮನ್ ಪೊವೆಲ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಒಡೆನ್ ಸ್ಮಿತ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್, ಕೀಮೋ ಪಾಲ್.