ವಿದೇಶಿಗರ ನೆಚ್ಚಿನ ಪ್ರವಾಸಿ ತಾಣವಾಗ್ತಿದೆ ಭಾರತ: ವಿದೇಶಿ ವಿನಿಮಯ ಗಳಿಕೆ 107 ಶೇ. ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ನಂತರದ ಕಾಲಘಟ್ಟದಲ್ಲಿ ಭಾರತಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು 2021ಕ್ಕೆ ಹೋಲಿಸಿದರೆ 2022ರಲ್ಲಿ ಪ್ರವಾಸೋದ್ಯಮದಿಂದ ವಿದೇಶಿ ವಿನಿಮಯ ಗಳಿಕೆಯು 107 ಶೇಕಡಾದಷ್ಟು ಏರಿಕೆಯಾಗಿದೆ. ಪ್ರವಾಸೋದ್ಯಮದಿಂದ ವಿದೇಶಿ ವಿನಿಮಯ ಗಳಿಕೆಯು 2021ರಲ್ಲಿ 65,070 ಕೋಟಿ ರೂ. ಗಳಷ್ಟಿತ್ತು. ಇದು 2022ರಲ್ಲಿ 1,34,543 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಸರ್ಕಾರಿ ಅಂಕಿ ಅಂಶಗಳು ತೋರಿಸಿವೆ.

ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಪ್ರವಾಸೋದ್ಯಮವು ಪುನಶ್ಚೇತನದ ಉತ್ತಮ ಲಕ್ಷಣಗಳನ್ನು ತೋರಿಸಿದೆ ಎಂದು ಪ್ರವಾಸೋದ್ಯಮ ಸಚಿವಾಲಯ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

ಈ ಕುರಿತು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಕಿಶನ್ ರೆಡ್ಡಿ ಬ್ಯೂರೋ ಆಫ್ ಇಮಿಗ್ರೇಷನ್‌ನ ಇತ್ತೀಚಿನ ಡೇಟಾವನ್ನು ಉಲ್ಲೇಖಿಸಿ “ಭಾರತಕ್ಕೆ 2021 ರಲ್ಲಿ 1.52 ಮಿಲಿಯನ್‌ಗಳಷ್ಟು ವಿದೇಶಿ ಪ್ರವಾಸಿಗರು ಆಗಮಿಸಿದ್ದರು. ಆದರೆ 2022ರಲ್ಲಿ ಈ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು 2022 ರಲ್ಲಿ 6.19 ಮಿಲಿಯನ್ ವಿದೇಶಿ ಪ್ರವಾಸಿಗರ ಆಗಮನವನ್ನು (ಎಫ್‌ಟಿಎ) ಸ್ವೀಕರಿಸಲಾಗಿದೆ” ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು “ಕೇಂದ್ರವು ದೇಶದಲ್ಲಿ ಪ್ರವಾಸೋದ್ಯಮ-ಸಂಬಂಧಿತ ಮೂಲಸೌಕರ್ಯ ಮತ್ತು ಸೌಲಭ್ಯಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರಗಳು,ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಏಜೆನ್ಸಿಗಳಿಗೆ ಯೋಜನಾಬದ್ಧವಾಗಿ ಮತ್ತು ಹಂತಹಂತವಾಗಿ ಸ್ವದೇಶ್ ದರ್ಶನ್, ಪ್ರಸಾದ್‌ ಮುಂತಾದ ಸಹಾಯದ ಯೋಜನೆಗಳ ಅಡಿಯಲ್ಲಿ ಹಣಕಾಸಿನ ನೆರವು ನೀಡುತ್ತಿದೆ. ಇದಲ್ಲದೇ ಪ್ರವಾಸಿಗರಿಗೆ ಅನುಕೂಲವಾಗಲು ಪ್ರವಾಸೋದ್ಯಮ ಸಚಿವಾಲಯವು ಜರ್ಮನ್, ಫ್ರೆಂಚ್, ಸ್ಪ್ಯಾನಿಷ್, ಇಟಾಲಿಯನ್, ಪೋರ್ಚುಗೀಸ್, ರಷ್ಯನ್, ಚೈನೀಸ್, ಜಪಾನೀಸ್, ಕೊರಿಯನ್, ಅರೇಬಿಕ್, ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ ಒಟ್ಟೂ 12 ಭಾಷೆಗಳಲ್ಲಿ ಮಾಹಿತಿ-ಸಹಾಯವಾಣಿಯನ್ನು ಸ್ಥಾಪಿಸಿದೆ. ಟೋಲ್-ಫ್ರೀ ಸಂಖ್ಯೆ 1800111363 ಅಥವಾ 1363 ಕೋಡ್‌ ಡಯಲ್‌ ಮಾಡುವ ಮೂಲಕ ವಿದೇಶಿ ಪ್ರವಾಸಿಗರು ಪ್ರವಾಸಕ್ಕೆ ಸಂಬಂಧಿಸಿದಂತೆ ಬೆಂಬಲ ಮತ್ತು ಮಾರ್ಗದರ್ಶನ ಪಡೆಯಬಹುದಾಗಿದೆ” ಎಂದಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!