ಮೋದಿ ಅಧಿಕಾರಕ್ಕೆ ಬಂದ ನಂತರ ಟಿಬೆಟ್‌ ವಿಚಾರದಲ್ಲಿ ಭಾರತದ ನಿಲುವು ಬದಲಾಗಿದೆ: ಪೆನ್ಪಾ ತ್ಸೇರಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತವು 2014 ರ ಬಳಿಕ ಟಿಬೆಟ್ ಕುರಿತ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದೆ ಎಂದು ಗಡಿಪಾರಾಗಿರುವ ಟಿಬೆಟ್ ಸರ್ಕಾರದ ಅಧ್ಯಕ್ಷ ಪೆನ್ಪಾ ತ್ಸೇರಿಂಗ್ ಅಮೇರಿಕಾದ ವಾಷಿಂಗ್ಟನ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಚೀನಾವು ಟಿಬೆಟ್‌ ಮೇಲೆ ತನ್ನ ಹಕ್ಕನ್ನು ಪ್ರದರ್ಶಿಸಿದಾಗ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಅದನ್ನು ಒಪ್ಪಿದ್ದರು. ಹಲವರ ದೃಷ್ಟಿಕೋನದಲ್ಲಿ ಅದೊಂದು ಐತಿಹಾಸಿಕ ತಪ್ಪಿನಂತೆ ಕಾಣಬಹುದು. ಆದರೆ ಆ ಸಂದರ್ಭದಲ್ಲಿ ತಮ್ಮ ದೇಶಕ್ಕೆ ಏನು ಒಳ್ಳೆಯದ್ದೆಂದು ನೆಹರು ನಂಬಿದ್ದರೋ ಆ ಪ್ರಕಾರವಾಗಿ ನಿರ್ಣಯವನ್ನು ಕೈಗೊಂಡಿದ್ದರು.
ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ 2014 ರಿಂದೀಚೆಗೆ ಟಿಬೆಟ್ ಸಮಸ್ಯೆಗಳ ಬಗ್ಗೆ ಭಾರತ ತನ್ನ ನಿಲುವನ್ನು ಹೆಚ್ಚು ಸಕಾರಾತ್ಮಕವಾಗಿ ಬದಲಾಯಿಸಿಕೊಂಡಿದೆ ಎಂದು ತ್ಸೆರಿಂಗ್ ಹೇಳಿದರು. ʼಟಿಬೆಟ್ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾʼ ದ ಭಾಗ ಎಂಬ ಹೇಳಿಕೆಯನ್ನು ಪುನರಾವರ್ತಿಸದೆ ಭಾರತವು ತನ್ನ ಹಳೆಯ (ನೆಹರು) ನೀತಿಯನ್ನು ಬದಲಾಯಿಸಿದೆ. ಭಾರತವು ‘ಒಂದು ಚೀನಾ’ ನೀತಿಗೆ ಬದ್ಧವಾಗಿರಬೇಕಾದರೆ, ಚೀನಾ ಕೂಡ ಕಾಶ್ಮೀರ ಮತ್ತು ಲಡಾಖ್‌ ವಿಚಾರಕ್ಕೆ ಸಂಬಂಧಿಸಿ ತನ್ನ ‘ಒನ್ ಇಂಡಿಯಾ’ ಬದ್ಧವಾಗಿರಬೇಕು ಎಂದು ಈಗಿನ ಭಾರತವು ಆಗ್ರಹಿಸುತ್ತದೆ ಎಂದು ಪೆನ್ಪಾ ತ್ಸೇರಿಂಗ್ ಹೇಳಿದ್ದಾರೆ.
ಜವಹರ್‌ ಲಾಲ್‌ ನೆಹರೂ ಅವರು ಚೀನಾವನ್ನು ತುಂಬಾ ನಂಬಿದ್ದರು. ಆದರೆ ಚೀನಾ ದ್ರೋಹ ಬಗೆದು 1962 ರಲ್ಲಿ ಭಾರತದ ಪ್ರದೇಶವನ್ನು ಆಕ್ರಮಿಸಿದಾಗ ಅವರು ತುಂಬಾ ನೊಂದುಕೊಂಡರು. ಅವರ ಸಾವಿಗೆ ಚೀನಾ ದ್ರೋಹದ ನೋವು ಒಂದು ಪ್ರಮುಖ ಕಾರಣ ಎಂದು ಹಲವರು ಹೇಳುತ್ತಾರೆ ಎಂದರು.
ಟಿಬೇಟ್‌ ವಿಚಾರವಾಗಿ ಅಮೆರಿಕದ ಕಾಂಗ್ರೆಸ್ ನ ಸದಸ್ಯರು ಹಾಗೂ ಬೈಡನ್ ಆಡಳಿತದ ಉನ್ನತಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ತ್ಸೇರಿಂಗ್ ಅಮೆರಿಕಾಗೆ ಭೇಟಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!