ರಾಷ್ಟ್ರೀಯ ಭದ್ರತೆ – ವಿದೇಶಿ ಸಂಬಂಧಗಳಿಗೆ ಧಕ್ಕೆ ತರುವ ಮಾಹಿತಿ ಪ್ರಸಾರ ಮಾಡುತ್ತಿದ್ದ 22 ಯೂಟ್ಯೂಬ್ ಚಾನೆಲ್ ಬ್ಯಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಐಟಿ ನಿಯಮಗಳು 2021ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು, ಭಾರತದ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ಸಂಬಂಧಗಳಿಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಹರಡುತ್ತಿದ್ದ 22 ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳು, ಮೂರು ಟ್ವಿಟರ್ ಖಾತೆಗಳು, ಒಂದು ಫೇಸ್‌ಬುಕ್ ಖಾತೆ ಹಾಗೂ ಒಂದು ಸುದ್ದಿ ವೆಬ್‌ಸೈಟ್ ಅನ್ನು ನಿರ್ಬಂಧಿಸಲು ಆದೇಶಗಳನ್ನು ಹೊರಡಿಸಿದೆ.

ಸಚಿವಾಲಯ ಹೊರಡಿಸಿದ ಆದೇಶದಲ್ಲಿ ನಿರ್ಬಂಧಿತ ಯೂಟ್ಯೂಬ್ ಚಾನೆಲ್‌ಗಳು 260 ಕೋಟಿಗೂ ಹೆಚ್ಚು ಸಂಚಿತ ವೀಕ್ಷಕರನ್ನು ಹೊಂದಿದ್ದವು. ಇವುಗಳು ಸುಳ್ಳು ಸುದ್ದಿಗಳನ್ನು ಹರಡಲು ಮತ್ತು ರಾಷ್ಟ್ರೀಯ ಭದ್ರತೆ, ಭಾರತದ ವಿದೇಶಿ ಸಂಬಂಧಗಳ ದೃಷ್ಟಿಕೋನದಿಂದ ಸೂಕ್ಷ್ಮ ವಿಷಯಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಗಳನ್ನು ಪ್ರಕಟಿಸಲು ಬಳಸಲ್ಪಡುತ್ತಿದ್ದವು.

ಸಚಿವಾಲಯದ ಪ್ರಕಾರ, ಕಳೆದ ವರ್ಷ ಫೆಬ್ರವರಿಯಲ್ಲಿ ಐಟಿ ನಿಯಮಗಳು, 2021ರ ಅಧಿಸೂಚನೆ ಜಾರಿಯಾದ ನಂತರ ಭಾರತೀಯ ಯೂಟ್ಯೂಬ್ ಆಧಾರಿತ ಸುದ್ದಿ ಪ್ರಕಾಶಕರ ಮೇಲೆ ಇದೇ ಮೊದಲ ಬಾರಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ಇತ್ತೀಚಿನ ನಿರ್ಬಂಧ ಆದೇಶದಲ್ಲಿ 18 ಭಾರತೀಯ ಮತ್ತು ನಾಲ್ಕು ಪಾಕಿಸ್ತಾನ ಮೂಲದ ಯೂಟ್ಯೂಬ್ ಸುದ್ದಿ ಚಾನೆಲ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಭಾರತೀಯ ಸಶಸ್ತ್ರ ಪಡೆಗಳು, ಜಮ್ಮು ಮತ್ತು ಕಾಶ್ಮೀರ ಮುಂತಾದ ವಿವಿಧ ವಿಷಯಗಳ ಕುರಿತು ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡಲು ಮಲ್ಟಿ ಯೂಟ್ಯೂಬ್ ಚಾನೆಲ್‌ಗಳನ್ನು ಬಳಸಲಾಗಿದೆ ಎಂದು ಸಚಿವಾಲಯ ಹೇಳಿದೆ. ನಿರ್ಬಂಧಿಸಲು ಆದೇಶಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಪಾಕಿಸ್ತಾನದಿಂದ ಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೆಲವು ಭಾರತ ವಿರೋಧಿ ವಿಷಯಗಳನ್ನು ಪೋಸ್ಟ್ ಮಾಡಿವೆ.

ಉಕ್ರೇನ್‌ನಲ್ಲಿ ನಡೆಯುತ್ತಿರುವ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಈ ಭಾರತೀಯ ಯೂಟ್ಯೂಬ್-ಆಧಾರಿತ ಚಾನೆಲ್‌ಗಳು ಪ್ರಕಟಿಸಿದ ಗಮನಾರ್ಹ ಪ್ರಮಾಣದ ಸುಳ್ಳು ವಿಷಯವನ್ನು ಗಮನಿಸಲಾಗಿದೆ. ಇವು ಇತರ ದೇಶಗಳೊಂದಿಗೆ ಭಾರತದ ವಿದೇಶಿ ಸಂಬಂಧಗಳಿಗೆ ಧಕ್ಕೆ ತರುವ ಗುರಿಯನ್ನು ಹೊಂದಿದೆ ಎಂದು ಸಚಿವಾಲಯ ತಿಳಿಸಿದೆ.

ಡಿಸೆಂಬರ್ 2021ರಿಂದ ರಾಷ್ಟ್ರೀಯ ಭದ್ರತೆ, ಸಾರ್ವಭೌಮತೆ ಮತ್ತು ಭಾರತದ ಸಮಗ್ರತೆ, ಸಾರ್ವಜನಿಕ ಸುವ್ಯವಸ್ಥೆ ಇತ್ಯಾದಿಗಳಿಗೆ ಸಂಬಂಧಿಸಿದ ಆಧಾರದ ಮೇಲೆ 78 ಯೂಟ್ಯೂಬ್ ಆಧಾರಿತ ಸುದ್ದಿ ಚಾನಲ್‌ಗಳು ಮತ್ತು ಹಲವಾರು ಇತರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲು ಸಚಿವಾಲಯವು ನಿರ್ದೇಶನಗಳನ್ನು ನೀಡಿದೆ.

ಭಾರತ ಸರಕಾರವು ಅಧಿಕೃತ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಆನ್‌ಲೈನ್ ಸುದ್ದಿ ಮಾಧ್ಯಮಗಳನ್ನು ಖಾತ್ರಿಪಡಿಸಿಕೊಳ್ಳಲು ಬದ್ಧವಾಗಿದೆ. ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳನ್ನು ತಡೆಯುತ್ತದೆ ಎಂದು ಸಚಿವಾಲಯ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!