ಹೊಸ ದಿಗಂತ ಡಿಜಿಟಲ್ ಡೆಸ್ಕ್
ಆಗಸದ ಆಟಗಳು ಅಂದರೆ ಪ್ಯಾರಾಗ್ಲೈಡಿಂಗ್, ಸ್ಕೈ ಡೈವಿಂಗ್, ಪ್ಯಾರಾ ಸೇಲಿಂಗ್, ಬಲೂನ್ ವಿಹಾರ ಇತ್ಯಾದಿಗಳಿಗೆ ಅನ್ವಯವಾಗುವಂತೆ ಕರಡು ನೀತಿಯೊಂದನ್ನು ಭಾರತದ ನಾಗರಿಕ ವಿಮಾನಯಾನ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದೆ. ಇದರ ಉದ್ದೇಶ, 2030ರ ವೇಳೆಗೆ ಈ ದೇಶವನ್ನು ಇಂಥ ಆಗಸದ ಕ್ರೀಡೆಗಳಲ್ಲಿ ಮುಂಚೂಣಿಯಲ್ಲಿ ನಿಲ್ಲಿಸುವುದು.
ಈಗ ಅಂಥ ಹಲವು ಆಟಗಳನ್ನು ಖಾಸಗಿಯವರು ಸಂಘಟಿಸುತ್ತಾರಾದರೂ ಅವಕ್ಕೆಲ್ಲ ಅನ್ವಯವಾಗುವ ಏಕರೂಪ ನಿಯಮಗಳಿಲ್ಲ. ಸುರಕ್ಷತೆಯ ಅಂಶಗಳಂತೂ ಪ್ರಶ್ನಾರ್ಹವಾಗಿವೆ. ಅಂತಾರಾಷ್ಟ್ರೀಯ ಸುರಕ್ಷತೆಯ ಮಾನದಂಡಗಳನ್ನು ಇಲ್ಲೂ ಅಳವಡಿಸುವುದನ್ನು ಕರಡು ನೀತಿ ಪ್ರಸ್ತಾಪಿಸಿದೆ. ಈ ಕ್ರೀಡೆಯನ್ನು ಉತ್ತೇಜಿಸುವ ಸಂಸ್ಥೆಗಳು ಪಾಲಿಸಬೇಕಾದ ನಿಯಮ, ನಿಯಮ ಉಲ್ಲಂಘನೆಗೆ ಅವು ತೆರಬೇಕಾದ ದಂಡ ಇವೆಲ್ಲದರ ಬಗ್ಗೆ ಕರಡಿನಲ್ಲಿ ಚರ್ಚೆಯಾಗಿದ್ದು, ಈ ಬಗ್ಗೆ ಎಲ್ಲ ಹಿತಾಸಕ್ತ ವಲಯಗಳಿಂದ ಪ್ರತಿಕ್ರಿಯೆ ಬಂದ ನಂತರ ಪಕ್ಕಾ ನೀತಿ ತಯಾರಿಸಲಾಗುತ್ತದೆ.
ಭಾರತವನ್ನು ಈ ಬಗೆಯ ಕ್ರೀಡೆಗಳ ತಾಣವಾಗಿಸಿದರೆ ಇಂಥ ಆಗಸದಾಟಗಳಿಂದ ನೇರವಾಗಿ ಬರುವ ಆದಾಯದ ಜತೆ ಪ್ರವಾಸೋದ್ಯಮವೂ ಅಭಿವೃದ್ಧಿಯಾಗುತ್ತದೆ ಹಾಗೂ ಈ ಹಂತದಲ್ಲಿ ಸ್ಥಳೀಯರಿಗೂ ಉದ್ಯೋಗ ಸಿಗುತ್ತದೆ ಎಂಬ ಚಿಂತನೆ ಸರ್ಕಾರದ್ದು.