ಗೋಧಿ ರಫ್ತು ನಿಷೇಧದಲ್ಲಿ ಸಡಿಲಿಕೆ, ಈಜಿಪ್ಟ್‌ಗೆ 61,500 ಮೆಟ್ರಿಕ್ ಟನ್ ಗೋಧಿ ರವಾನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗೋಧಿ ರಫ್ತು ನಿಷೇಧದ ವಿಚಾರದಲ್ಲಿ ಕೇಂದ್ರ ಸರ್ಕಾರ ಸಡಿಲಿಸಿದೆ. ಮೇ 13 ರೊಳಗೆ, ಭಾರತ ಸರ್ಕಾರ ನಿಷೇಧಕ್ಕೂ ಮೊದಲು ಗೋಧಿ ರಫ್ತಿಗೆ ನೊಂದಾಯಿಸಿದ ದೇಶಗಳಿಗೆ ರಫ್ತು ಮಾಡುವಂತೆ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮತಿ ನೀಡಿರುವುದಾಗಿ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಇದರ ಭಾಗವಾಗಿ ಈಜಿಪ್ಟ್ ದೇಶಕ್ಕೆ ಗೋಧಿ ಕಳುಹಿಸುವ ಆದೇಶಕ್ಕೆ ಅವಕಾಶ ನೀಡಿದ್ದಾರೆ.

ಈಜಿಪ್ಟ್‌ಗೆ ಕಳುಹಿಸಬೇಕಾದ ಗೋಧಿಯನ್ನು ಕಾಂಡ್ಲಾ ಬಂದರಿನಲ್ಲಿ ಲೋಡ್‌ ಮಾಡುವ ವೇಳೆ ಕೇಂದ್ರ ಸರ್ಕಾರ ರಫ್ತು ನಿಷೇಧಿಸಲು ನಿರ್ಧರಿಸಿತು. ಹಾಗಾಗಿ ಲೋಡಿಂಗ್ ಅರ್ಧಕ್ಕೇ ನಿಂತಿದೆ. ಇದೀಗ ಈಜಿಪ್ಟ್ ಸರ್ಕಾರವು ಕಾಂಡ್ಲಾ ಬಂದರಿನಲ್ಲಿರುವ ಗೋಧಿಯನ್ನು ಸಾಗಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಮನವಿಯಂತೆ 61,500 ಮೆಟ್ರಿಕ್ ಟನ್ ಗೋಧಿಯನ್ನು ಭಾರತ ಈಜಿಪ್ಟ್‌ಗೆ ಕಳುಹಿಸಬೇಕಿದೆ.

ಇದರಲ್ಲಿ 44,340 ಮೆಟ್ರಿಕ್ ಟನ್ ಗೋಧಿಯನ್ನು ಈಗಾಗಲೇ ಲೋಡ್ ಮಾಡಲಾಗಿದ್ದು, ಇನ್ನೂ 17 ಸಾವಿರದ 160 ಮೆಟ್ರಿಕ್ ಟನ್ ಗೋಧಿ ಉಳಿದಿದೆ. ಈಜಿಪ್ಟ್ ಸರ್ಕಾರ ಆದೇಶದ ಸಂಪೂರ್ಣ ಗೋಧಿಯನ್ನು ತಮ್ಮ ದೇಶಕ್ಕೆ ಕಳುಹಿಸುವಂತೆ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕಾಂಡ್ಲಾ ಬಂದರಿನಿಂದ ಈಜಿಪ್ಟ್ ಗೆ ಒಟ್ಟು 61,500 ಮೆಟ್ರಿಕ್ ಟನ್ ಗೋಧಿ ರವಾನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಭಾರತ ಸರ್ಕಾರ ನಿಷೇಧ ಆದೇಶಕ್ಕೂ ಮೊದಲು ಬಂದರಿನಲ್ಲಿ ನಾಲ್ಕು ಹಡಗುಗಳಿಗೆ ಗೋಧಿ ರಫ್ತು ಮಾಡಲು ಡಿಜಿಎಫ್‌ಟಿ ಅನುಮತಿ ನೀಡಿತ್ತು. ಈ ಹಡಗುಗಳಲ್ಲಿ 1,67,211 ಟನ್‌ಗಳಷ್ಟು ಪ್ರಮಾಣವನ್ನು ಲೋಡ್ ಮಾಡಬೇಕಾಗಿತ್ತು. ಆದರೆ ನಿಷೇಧ ಜಾರಿಗೆ ಬಂದ ತಕ್ಷಣ ಲೋಡಿಂಗ್ ನಿಲ್ಲಿಸಲಾಯಿತು. ಪ್ರಸ್ತುತ ಈ ಹಡಗುಗಳಲ್ಲಿ 80,368 ಟನ್ ಗೋಧಿಯನ್ನು ಮಾತ್ರ ಲೋಡ್ ಮಾಡಲಾಗಿದೆ. ಈ ಹಡಗುಗಳ ಮೂಲಕ ಬ್ರೆಜಿಲ್, ಬಾಂಗ್ಲಾದೇಶ, ಓಮನ್ ಮತ್ತು ಇಂಡೋನೇಷ್ಯಾಕ್ಕೆ ಗೋಧಿಯನ್ನು ರಫ್ತು ಮಾಡಬೇಕಿತ್ತು. ಸರ್ಕಾರದ ಆದೇಶದ ಮೇರೆಗೆ ಉಳಿದ ದೇಶಗಳ ಗೋಧಿ ರಫ್ತಿಗೆ ಬ್ರೇಕ್‌ ಬಿದ್ದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!