ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಗತ್ತಿನ ಅತಿ ದೊಡ್ಡ ಜವಳಿ ಸಮಾವೇಶಗಳಲ್ಲಿ ಒಂದಾದ ‘ಭಾರತ್ ಟೆಕ್ಸ್–2026’ರಲ್ಲಿ ಕರ್ನಾಟಕ ರಾಜ್ಯವು ಹೂಡಿಕೆದಾರರನ್ನು ಸೆಳೆಯುವಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಸಮಾವೇಶದಲ್ಲಿ ರಾಜ್ಯ ಸರ್ಕಾರವು ವಿವಿಧ ಜಾಗತಿಕ ಮತ್ತು ರಾಷ್ಟ್ರೀಯ ಸಂಸ್ಥೆಗಳೊಂದಿಗೆ ಬರೋಬ್ಬರಿ 2,821 ಕೋಟಿ ರೂ. ಮೌಲ್ಯದ 12 ಪ್ರಮುಖ ಹೂಡಿಕೆ ಒಪ್ಪಂದಗಳಿಗೆ ಅಧಿಕೃತವಾಗಿ ಸಹಿ ಹಾಕಿದೆ.
11,020ಕ್ಕೂ ಹೆಚ್ಚು ಉದ್ಯೋಗಾವಕಾಶ ಸೃಷ್ಟಿ:
ಈ ಕುರಿತು ಮಾಹಿತಿ ನೀಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಭಾರತ್ ಟೆಕ್ಸ್–2026 ಸಮಾವೇಶವು ರಾಜ್ಯದ ಜವಳಿ ವಲಯಕ್ಕೆ ಹೊಸ ಶಕ್ತಿ ತುಂಬಿದೆ. ಈ 12 ಒಪ್ಪಂದಗಳ ಮೂಲಕ ಹರಿದು ಬರಲಿರುವ 2,821 ಕೋಟಿ ರೂಪಾಯಿ ಹೂಡಿಕೆಯಿಂದಾಗಿ ರಾಜ್ಯದಾದ್ಯಂತ ಕನಿಷ್ಠ 11,020 ಕ್ಕೂ ಹೆಚ್ಚು ಜನರಿಗೆ ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಟೆಕ್ಸ್‌ಟೈಲ್ ಹಬ್ ಆಗಲಿರುವ ಕರ್ನಾಟಕ:
ಈ ಬೃಹತ್ ಹೂಡಿಕೆಗಳು ರಾಜ್ಯದ ವಿವಿಧ ಭಾಗಗಳಲ್ಲಿ ಜವಳಿ ಉದ್ಯಮದ ವಿಸ್ತರಣೆ ಮತ್ತು ಆಧುನೀಕರಣಕ್ಕೆ ನೆರವಾಗಲಿವೆ. ನವದೆಹಲಿಯಲ್ಲಿ ನಡೆದ ಈ ಮೇಳದಲ್ಲಿ ಕರ್ನಾಟಕದ ಜವಳಿ ನೀತಿ ಮತ್ತು ಮೂಲಸೌಕರ್ಯಗಳನ್ನು ಪ್ರದರ್ಶಿಸಲಾಗಿದ್ದು, ಹಲವು ಪ್ರಮುಖ ಉದ್ಯಮಗಳು ರಾಜ್ಯದಲ್ಲಿ ಘಟಕಗಳನ್ನು ಸ್ಥಾಪಿಸಲು ಆಸಕ್ತಿ ತೋರ್ಪಡಿಸಿವೆ. ಈ ಹೂಡಿಕೆಯು ಗ್ರಾಮೀಣ ಭಾಗದ ಮಹಿಳೆಯರು ಮತ್ತು ಯುವಕರಿಗೆ ಹೆಚ್ಚಿನ ಉದ್ಯೋಗ ನೀಡಲು ನೆರವಾಗಲಿದೆ ಎಂದು ಇಲಾಖೆ ಆಶಿಸಿದೆ.



