Thursday, August 18, 2022

Latest Posts

ಇಂದು ಭಾರತ- ವಿಂಡೀಸ್ ಮೊದಲ ಟಿ- 20: ಹೀಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್‌ XI; ಪಂದ್ಯ ಆರಂಭ ಎಷ್ಟು ಗಂಟೆಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಏಕದಿನ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿರುವ ಟೀಂ ಇಂಡಿಯಾ ಇದೀಗ ಟಿ.20 ಕದನಕ್ಕೆ ಸಜ್ಜಾಗಿದೆ. ಇಂದು ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಮೊದಲ ಚುಟುಕು ಕದನ ನಡೆಯಲಿದೆ.
ಟಿ-20 ಗೆ ಟೀಂ ಇಂಡಿಯಾ ವಿಭಿನ್ನ ತಂಡದಿಂದಿಗೆ ಕಣಕ್ಕಿಳಿಯಲಿದೆ. ಏಕದಿನ ಸರಣಿ ಆಡಿದ ಹೆಚ್ಚಿನ ಆಟಗಾರರು ಟಿ.20 ಸರಣಿಯನ್ನು ಆಡುತ್ತಿಲ್ಲ. ಇವರಲ್ಲಿ ಬ್ಯಾಟರ್‌ಗಳಾದ ಶಿಖರ್ ಧವನ್, ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ಕೀಪರ್ ಸಂಜು ಸ್ಯಾಮ್ಸನ್, ಸ್ಪಿನ್ನರ್ ಯುಜ್ವೇಂದ್ರ ಚಾಹಲ್, ವೇಗಿಗಳಾದ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ಅವರು ಟಿ 20 ಐ ಸರಣಿಗೆ ಲಭ್ಯರಿಲ್ಲ. ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ ನಾಯಕನಾಗಿ ಮರಳಿದ್ದಾರೆ. ಆದಾಗ್ಯೂ, ಕೋವಿಡ್ -19 ಕಾರಣದಿಂದಾಗಿ ಕೆಎಲ್ ರಾಹುಲ್ ಕಣಕ್ಕಿಳಿಯುವುದು ಇನ್ನೂ ನಿರ್ಧಾರವಾಗಿಲ್ಲ.
ರೋಹಿತ್ ಶರ್ಮಾ ಜೊತೆಗೆ ಎರಡನೇ ಆರಂಭಿಕ ಆಟಗಾರನ ಆಯ್ಕೆ ಟೀಮ್ ಇಂಡಿಯಾಕ್ಕೆ ದೊಡ್ಡ ಪ್ರಶ್ನೆಯಾಗಿದೆ. ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಪ್ರಾಥಮಿಕ ಬ್ಯಾಕಪ್ ಓಪನರ್ ಇಶಾನ್ ಕಿಶನ್ ಇದ್ದರೆ, ಎರಡನೆಯ ಆಯ್ಕೆಯಾಗಿ ರಿಷಬ್ ಪಂತ್ ರನ್ನು ಕಣಕ್ಕಿಳಿಸಿ ಮತ್ತೊಮ್ಮೆ ಪ್ರಯೋಗಕ್ಕೆ ಮುಂದಾಗಬಹುದು.
ಮೂರನೇ ಕ್ರಮಾಂಕದಲ್ಲಿ ಯಾರು ಕಣಕ್ಕಿಳಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿರುವುದರಿಂದ ಈ ಸ್ಥಾನದಲ್ಲಿ ಆಡಲು ದೀಪಕ್ ಹೂಡಾ ಹಾಗೂ ಶ್ರೇಯಸ್ ಅಯ್ಯರ್ ನಡುವೆ ಪೈಪೋಟಿ ಏರ್ಪಟ್ಟಿದೆ.  ಏಕದಿನ ಸರಣಿಯಲ್ಲಿ 3 ನೇ ಸ್ಥಾನದಲ್ಲಿ ಆಡಿದ್ದ ಶ್ರೇಯಸ್ ಅಯ್ಯರ್ ಟಿ.20ಯಲ್ಲೂ ಕಣಕ್ಕಿಳಿಯುವ ಸಾಧ್ಯತೆ ಇದೆ. ಆ ಬಳಿಕ ಸೂರ್ಯಕುಮಾರ್ ಯಾದವ್,  ದಿನೇಶ್‌ ಕಾರ್ತಿಕ್‌, ರವೀಂದ್ರ ಜಡೇಜಾ ಸ್ಥಾನ ಪಕ್ಕಾ.
ಬೌಲಿಂಗ್ ವಿಭಾಗದಲ್ಲಿ ಭಾರತಕ್ಕೆ ಹೆಚ್ಚಿನ ಆಯ್ಕೆಗಳಿವೆ. ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ರವೀಂದ್ರ ಜಡೇಜಾ, ಮತ್ತು ಕುಲ್ದೀಪ್ ಯಾದವ್ ಪ್ಲೇಯಿಂಗ್‌ 11 ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಸ್ಪಿನ್ನರ್ ರವಿ ಬಿಷ್ಣೋಯ್, ಅವೇಶ್ ಖಾನ್, ಅಥವಾ ಅರ್ಶ್ದೀಪ್ ಸಿಂಗ್ ಇನ್ನೊಂದು ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. ರವಿಚಂದ್ರನ್ ಅಶ್ವಿನ್ ಮತ್ತೆ  T20 ಫಾರ್ಮ್ಯಾಟ್‌ ಗೆ ಮರಳಿದ್ದು ತಂಡದಲ್ಲಿ ಸ್ಥಾನ ಪಡೆಯಲು ಎದುರು ನೋಡುತ್ತಿದ್ದಾರೆ. ಹಿರಿಯ ಸ್ಪಿನ್ನರ್ ಅಶ್ವಿನ್ ಕಳೆದ ವರ್ಷ (ನವೆಂಬರ್) ನ್ಯೂಜಿಲೆಂಡ್ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಕೊನೆಯ ಬಾರಿಗೆ ಟಿ.20 ಪಂದ್ಯ ಆಡಿದ್ದರು.
ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 08:00 ಗಂಟೆಗೆ ಆರಂಭವಾಗಲಿದ್ದು, ಪಂದ್ಯದ ಟಾಸ್ ಸಂಜೆ 07:30ಕ್ಕೆ ನಡೆಯಲಿದೆ. ಉಭಯ ತಂಡಗಳು ಈ ವರ್ಷದ ಫೆಬ್ರವರಿಯಲ್ಲಿ ಕೊನೆಯ ಬಾರಿಗೆ ಟಿ.20 ಸರಣಿಯನ್ನು ಆಡಿದ್ದವು. ಆಗ ಭಾರತ 3-0 ರಲ್ಲಿ ಸರಣಿ ಗೆದ್ದುಕೊಂಡಿತ್ತು.

ಸಂಭಾವ್ಯ XI:- ರೋಹಿತ್ ಶರ್ಮಾ (C), ರಿಷಬ್ ಪಂತ್ (WK), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್ ಮತ್ತು ಅರ್ಷದೀಪ್ ಸಿಂಗ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!