ಹೊಸದಿಗಂತ ಡಿಜಿಟಲ್ ಡೆಸ್ಕ್ :
ಭಾರತೀಯ ಮೂಲದ ಅಮೆರಿಕನ್ ರಾಜಕಾರಣಿ, ರಿಪಬ್ಲಿಕನ್ ಪಕ್ಷದ ನಾಯಕಿ ನಿಕ್ಕಿ ಹ್ಯಾಲೆ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬುಧವಾರ ಘೋಷಿಸಿದ್ದಾರೆ.
ಒಂದು ಕಾಲದ ತಮ್ಮ ನಾಯಕ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೂನಿಯರ್ ಹಾಗೂ ಅವರಿಗೆ ಪರ್ಯಾಯ ಹೊಸ ಮುಖ ಎಂದು ತಮ್ಮನ್ನು ತಾವು ಬಿಂಬಿಸಿಕೊಂಡಿದ್ದಾರೆ.
51 ವರ್ಷದ ಹ್ಯಾಲಿ ಅವರು ಸೌತ್ ಕೆರೊಲಿನಾದಲ್ಲಿ ಎರಡು ಭಾರಿ ಗವರ್ನರ್ ಆಗಿದ್ದರು ಮತ್ತು ವಿಶ್ವಸಂಸ್ಥೆಯ ಮಾಜಿ ಯುಎಸ್ ರಾಯಭಾರಿಯಾಗಿದ್ದಾರೆ.
ದಕ್ಷಿಣ ಕೆರೊಲಿನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಬಲವಾದ ಅಮೆರಿಕಕ್ಕಾಗಿ… ಹೆಮ್ಮೆಯ ಅಮೆರಿಕಕ್ಕಾಗಿ… ನಾನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ!’ಎಂದು ಹೇಳಿದರು.
“ಅಮೆರಿಕಾ ವಿಚಲಿತವಾದಾಗ, ಜಗತ್ತು ಕಡಿಮೆ ಸುರಕ್ಷಿತವಾಗುತ್ತದೆ. ಇಂದು ನಮ್ಮ ಶತ್ರುಗಳು ಅಮೆರಿಕದ ಯುಗವು ಮುಗಿದಿದೆ ಎಂದು ಭಾವಿಸುತ್ತಿದ್ದಾರೆ. ಅದು ಅವರ ತಪ್ಪು ಆಲೋಚನೆ. ಅಮೆರಿಕ ಯಾವತ್ತೂ ತನ್ನ ಸ್ಥಾನವನ್ನು ಕಳೆಕೊಳ್ಳುವುದಿಲ್ಲ” ಎಂದು ಮಾತನಾಡಿದರು.
ಈ ಮೂಲಕ ಮೂರನೇ ಬಾರಿಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದ ಡೊನಾಲ್ಡ್ ಟ್ರಂಪ್ ಅವರಿಗೆ ನಾನು ಮೊದಲ ಪ್ರತಿ ಸ್ಪರ್ಧಿ ಎಂದು ಹೇಳುವ ಪ್ರಯತ್ನವನ್ನು ನಿಕ್ಕಿ ಮಾಡಿದ್ದಾರೆ.