ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನದ ಕಾಕ್ಪಿಟ್ನಲ್ಲೇ ಸಹಪೈಲಟ್ನಿಂದ ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರೂ ಕರ್ತವ್ಯಪ್ರಜ್ಞೆ ಮೆರೆದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಧೈರ್ಯಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದುಬೈಯಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಈ ಘಟನೆ ದೊಡ್ಡ ವಾಯು ದುರಂತವಾಗಿ ಮಾರ್ಪಡುವುದನ್ನು ತಡೆಯುವಲ್ಲಿ ಪೈಲಟ್ ಹಾಗೂ ಪ್ರಯಾಣಿಕರ ಸಮಯಪ್ರಜ್ಞೆ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ.
ಫ್ಲೈದುಬೈಯ FZ1073 ವಿಮಾನ ಸೆ.30ರಂದು ದುಬೈಯಿಂದ ಇಸ್ರೇಲ್ಗೆ ತೆರಳುತ್ತಿದ್ದ ವೇಳೆ ಕಾಕ್ಪಿಟ್ನಲ್ಲಿ ಗಂಭೀರ ಘರ್ಷಣೆ ಸಂಭವಿಸಿತ್ತು. ಫ್ಲೈದುಬೈ ಅಧಿಕೃತವಾಗಿ ಕಾಕ್ಪಿಟ್ನಲ್ಲಿ “ಘರ್ಷಣೆ” ನಡೆದಿರುವುದನ್ನು ದೃಢಪಡಿಸಿದೆ.
ಏನಿದು ಘಟನೆ?
ಸಹಪೈಲಟ್ನ ದಾಳಿಯಿಂದ ಸ್ಮಿತ್ ಗಂಭೀರವಾಗಿ ಗಾಯಗೊಂಡು ರಕ್ತಸ್ರಾವವಾಗಿದ್ದರೂ ಕಾಕ್ಪಿಟ್ ಬಾಗಿಲನ್ನು ತೆರೆಯಲು ಸಾಧ್ಯವಾಯಿತು. ಬಳಿಕ ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿ ಕಾಕ್ಪಿಟ್ಗೆ ತೆರಳಿ ದಾಳಿ ನಡೆಸಿದ ವ್ಯಕ್ತಿಯನ್ನು ನಿಯಂತ್ರಿಸಲು ನೆರವಾದರು. ವಿಮಾನದಲ್ಲಿದ್ದ ಹೆಚ್ಚುವರಿ ತರಬೇತಿ ಪಡೆದ ಪೈಲಟ್ಗಳು ನಂತರ ನಿಯಂತ್ರಣ ವಹಿಸಿಕೊಂಡು ವಿಮಾನವನ್ನು ಸುರಕ್ಷಿತವಾಗಿ ತಬೂಕ್ಗೆ ಕೊಂಡೊಯ್ದರು.
ಇದನ್ನೂ ಓದಿ:
ವಿಮಾನದಲ್ಲಿ ಒಟ್ಟು 174 ಮಂದಿ ಇದ್ದರು ಎಂದು ವರದಿಯಾಗಿದ್ದು, ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ. ಸ್ಮಿತ್ ಮಚ್ಚಾರ್ ಅವರಿಗೆ ಸೌದಿ ಅರೇಬಿಯಾದಲ್ಲಿ ತುರ್ತು ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದುಬೈಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
ಅದ್ಭುತ ಧೈರ್ಯ ಎಂದ ನೆತನ್ಯಾಹು
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ನೆತನ್ಯಾಹು, ಸ್ಮಿತ್ ಅವರ ಕ್ರಮವನ್ನು ಅದ್ಭುತ ಧೈರ್ಯ ಎಂದು ಬಣ್ಣಿಸಿದ್ದಾರೆ. ಅಷ್ಟೇ ಅಲ್ಲದೆ ಇದು ಅಸಾಧಾರಣ ವೀರತೆ. ವಿಶೇಷ ಪಡೆಗಳಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಆದರೆ ಇಂತಹ ಘಟನೆ ನಾನು ಕಂಡಿಲ್ಲ ಎಂದರು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತದ ಹಲವು ನಾಯಕರು ಕೂಡ ಭಾರತೀಯ ಪೈಲಟ್ನ ಧೈರ್ಯವನ್ನು ಶ್ಲಾಘಿಸಿದ್ದಾರೆ.



