ಹೊಸದಿಗಂತ ಡಿಜಿಟಲ್ ಡೆಸ್ಕ್ :
ಇಂಡಿಯನ್ ರೇಸಿಂಗ್ ಲೀಗ್ (IRL) 2025-26ರ ಸೀಸನ್‌ನ ಅಧಿಕೃತ ಫಲಿತಾಂಶಗಳನ್ನು ಪ್ರಕಟಿಸಿದೆ. ನವಿ ಮುಂಬೈ ರೇಸ್ ಮುಂದಿನ ಸೀಸನ್‌ಗೆ (ಆಗಸ್ಟ್ 2026) ಮುಂದೂಡಲ್ಪಟ್ಟ ಕಾರಣ, ಗೋವಾ ಸ್ಟ್ರೀಟ್ ರೇಸ್‌ನ ಮುಕ್ತಾಯದೊಂದಿಗೆ ಸೀಸನ್ ಪೂರ್ಣಗೊಂಡಿದೆ ಎಂದು ಘೋಷಿಸಲಾಗಿದೆ.
ನವಿ ಮುಂಬೈ ರೇಸ್ ಈಗ ಆಗಸ್ಟ್ 2026 ರಿಂದ ಆರಂಭವಾಗಲಿರುವ ಇಂಡಿಯನ್ ರೇಸಿಂಗ್ ಲೀಗ್‌ನ ಮುಂದಿನ ಆವೃತ್ತಿಯ ಒಂದು ಸುತ್ತಾಗಿ ಸೇರ್ಪಡೆಗೊಳ್ಳಲಿದೆ. ಅತ್ಯಂತ ಯಶಸ್ವಿ ಮತ್ತು ರೋಚಕ ಸೀಸನ್‌ನ ಸಮಾರೋಪದ ನಂತರ, ಪರಿಷ್ಕೃತ ಅಂಕಪಟ್ಟಿಯ ಆಧಾರದ ಮೇಲೆ 2025-26ರ ಸಾಲಿನ ಚಾಂಪಿಯನ್‌ಗಳನ್ನು ಇಂಡಿಯನ್ ರೇಸಿಂಗ್ ಲೀಗ್ ಘೋಷಿಸಿದೆ. ಈ ಸೀಸನ್‌ನಲ್ಲಿ ನಾಲ್ಕು ಸುತ್ತುಗಳ ಅದ್ಭುತ ಮೋಟಾರ್‌ಸ್ಪೋರ್ಟ್ ಸ್ಪರ್ಧೆಗಳು ನಡೆದವು. ಕೊಯಮತ್ತೂರಿನಲ್ಲಿ ಎರಡು ಸುತ್ತುಗಳು, ನಂತರ ಚೆನ್ನೈನಲ್ಲಿ ಒಂದು ಹಾಗೂ ಗೋವಾದ ಸ್ಮರಣೀಯ ಸ್ಟ್ರೀಟ್ ರೇಸ್‌ನೊಂದಿಗೆ ಈ ಸೀಸನ್ ಮುಕ್ತಾಯಗೊಂಡಿತು.
ಗೋವಾ ಅಸಸ್ ಜೆಎ ರೇಸಿಂಗ್ ತಂಡವು ಏಳು ರೇಸ್‌ಗಳಲ್ಲಿನ ತಮ್ಮ ಐದು ಅತ್ಯುತ್ತಮ ಪ್ರದರ್ಶನಗಳ ಮೂಲಕ ಒಟ್ಟು 141 ಅಂಕಗಳನ್ನು ಗಳಿಸಿ, ಇಂಡಿಯನ್ ರೇಸಿಂಗ್ ಲೀಗ್ ಸೀಸನ್ 4ರ ‘ಟೀಮ್ಸ್ ಚಾಂಪಿಯನ್ಸ್’ ಪಟ್ಟವನ್ನು ಅಲಂಕರಿಸಿದೆ.
ಸ್ಪೀಡ್ ಡೆಮನ್ಸ್ ದೆಹಲಿ ತಂಡವು 135 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆಯಿತು. ಕಾರ್ಸ್ ಚಾಂಪಿಯನ್‌ಶಿಪ್ ವಿಭಾಗದಲ್ಲಿ ಗೋವಾ ಅಸಸ್ ಜೆಎ ರೇಸಿಂಗ್‌ನ ಕಾರ್ #5ರ ಜೋಡಿಯಾದ ರಾವುಲ್ ಹೈಮನ್ ಮತ್ತು ಫ್ಯಾಬಿಯೆನ್ ವೋಲ್ವೆಂಡ್ 101 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಕೋಲ್ಕತ್ತಾ ರಾಯಲ್ ಟೈಗರ್ಸ್‌ನ ಸೋಹಿಲ್ ಶಾ ಮತ್ತು ಥಾಮಸ್ ಕ್ಯಾನಿಂಗ್ 81 ಅಂಕಗಳೊಂದಿಗೆ ಎರಡನೇ ಸ್ಥಾನ ಹಾಗೂ ಸ್ಪೀಡ್ ಡೆಮನ್ಸ್ ದೆಹಲಿಯ ಅಲಿಸ್ಟರ್ ಯೂಂಗ್ ಮತ್ತು ಕೈಟ್ಲಿನ್ ವುಡ್ 75 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ.

ರೇಸಿಂಗ್ ಪ್ರೊಮೋಷನ್ಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಅಖಿಲೇಶ್ ರೆಡ್ಡಿ ಅವರು ಮಾತನಾಡಿ, ಈ ಆವೃತ್ತಿಯು ಭಾರತೀಯ ಮೋಟಾರ್‌ಸ್ಪೋರ್ಟ್ ಪ್ರತಿಭೆಗಳ ಜೊತೆಗೆ ಸಿನಿಮಾ ಮತ್ತು ಕ್ರೀಡಾ ರಂಗದ ಗಣ್ಯರನ್ನು ಒಗ್ಗೂಡಿಸಿ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಗೋವಾ ಸ್ಟ್ರೀಟ್ ರೇಸ್‌ನಲ್ಲಿ ನಡೆದ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ರಾವುಲ್ ಹೈಮನ್ ಮತ್ತು ಫ್ಯಾಬಿಯೆನ್ ವೋಲ್ವೆಂಡ್ ಜಯಗಳಿಸುವ ಮೂಲಕ ಗೋವಾ ಅಸಸ್ ಜೆಎ ರೇಸಿಂಗ್ ತಂಡಕ್ಕೆ ಚಾಂಪಿಯನ್‌ಶಿಪ್ ಮುಕುಟವನ್ನು ತೊಡಿಸಿದರು. ಅಂತಿಮ ಅಂಕಪಟ್ಟಿಯಲ್ಲಿ ಕಿಚ್ಚ ಸುದೀಪ್ ಮಾಲೀಕತ್ವದ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು 115 ಅಂಕಗಳೊಂದಿಗೆ ಮೂರನೇ ಸ್ಥಾನ ಗಳಿಸಿದರೆ, ಕೋಲ್ಕತ್ತಾ ರಾಯಲ್ ಟೈಗರ್ಸ್ 107 ಅಂಕ, ಹೈದರಾಬಾದ್ ಬ್ಲ್ಯಾಕ್ ಬರ್ಡ್ಸ್ 86 ಅಂಕ ಮತ್ತು ಚೆನ್ನೈ ಟರ್ಬೊ ರೈಡರ್ಸ್ 75 ಅಂಕಗಳನ್ನು ಪಡೆದಿವೆ.
ಈ ಫೆಸ್ಟಿವಲ್‌ನಲ್ಲಿ ಜಾನ್ ಅಬ್ರಹಾಂ, ಅರ್ಜುನ್ ಕಪೂರ್, ಸೌರವ್ ಗಂಗೂಲಿ, ನಾಗ ಚೈತನ್ಯ, ಕಿಚ್ಚ ಸುದೀಪ್ ಮತ್ತು ಡಾ. ಶ್ವೇತಾ ಸುದೀಪ್ ಆನಂದ್ ಅವರಂತಹ ಪ್ರಸಿದ್ಧ ವ್ಯಕ್ತಿಗಳು ತಂಡಗಳ ಮಾಲೀಕರಾಗಿ ಭಾಗವಹಿಸಿದ್ದರು. ಮುಂದಿನ ಆವೃತ್ತಿಯು ಆಗಸ್ಟ್ 2026 ರಲ್ಲಿ ಪ್ರಾರಂಭವಾಗಲಿದ್ದು, ದೇಶಾದ್ಯಂತ ಒಟ್ಟು ಆರು ಸುತ್ತುಗಳೊಂದಿಗೆ ಮತ್ತಷ್ಟು ವಿಸ್ತಾರವಾಗಿ ನಡೆಯಲಿದೆ. ಜೆಕೆ ಟೈರ್, ನಯಾರಾ ಮತ್ತು ಮೊಬಿಲ್ 1 ಸಹಯೋಗದೊಂದಿಗೆ ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಭಾರತದ ಮೋಟಾರ್‌ಸ್ಪೋರ್ಟ್ ಕ್ರಾಂತಿಗೆ ಹೊಸ ವೇಗ ನೀಡುತ್ತಿದೆ.



