Monday, September 26, 2022

Latest Posts

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಜಗತ್ತಿಗೆ ಮಾದರಿಯಾಗಿದೆ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ ಹಾವೇರಿ:

ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯ ಯಶಸ್ಸು ಜಗತ್ತಿಗೆ ಮಾದರಿಯಾಗಿದೆ. ಭಾರತದಲ್ಲಿ ಮಾತ್ರ ಪ್ರಜಾಪ್ರಭುತ್ವದ ತತ್ವಗಳು, ಆದರ್ಶಗಳು ಗಟ್ಟಿಯಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಭಾನುವಾರ ವಕೀಲರ ಸಂಘದ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನ್ಯಾಯಾಂಗ ವ್ಯವಸ್ಥೆ ಉತ್ತಮ ಕೆಲಸ ಮಾಡಿದ್ದರಿಂದ ಪ್ರಜಾಪ್ರಭುತ್ವದ ವ್ಯವಸ್ಥೆ ಉತ್ತಮವಾಗಿರುವುದಕ್ಕೆ ಕಾರಣವಾಗಿದೆ ಎಂದು ತಿಳಿಸಿದರು. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಮತ್ತು ಪತ್ರಿಕಾರಂಗ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿದ್ದರಿಂದ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿದೆ. ನಾಲ್ಕು ಅಂಗಗಳ ಮೇಲೆ ನಿಂತಿರೋದು ಎಂದು ಹೇಳಿದರು.

ಕರ್ನಾಟಕದ ನ್ಯಾಯಾಂಗ ವ್ಯವಸ್ಥೆ ನೋಡಿದ್ರೆ ಉನ್ನತ ಮಟ್ಟದ ನ್ಯಾಯಾಂಗವನ್ನು ನಮ್ಮ ಹಿರಿಯರು ಕೊಟ್ಟಿದ್ದಾರೆ. ಎಲ್ಲ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಅತ್ಯುತ್ತಮ ನ್ಯಾಯಾಂಗ ವ್ಯವಸ್ಥೆ ಮತ್ತು ಮೂಲ ಸೌಕರ್ಯಗಳನ್ನು ಹೊಂದಿದೆ. ನ್ಯಾಯಾಲಯ ವ್ಯವಸ್ಥೆಯ ಮೂಲ ಸೌಕರ್ಯಗಳಿಗಾಗಿ ಎಂಟು ನೂರು ಕೋಟಿ ರುಪಾಯಿ ಕೊಟ್ಟಿದ್ದೇವೆ. ನಮ್ಮ ಸರ್ಕಾರ ನ್ಯಾಯಾಂಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು ಕೆಲಸ ಮಾಡುತ್ತಿದೆ ಎಂದರು.

ನ್ಯಾಯಾಂಗ ಮತ್ತು ವಕೀಲರ ನಡುವೆ ವೃತ್ತಿಯ ಸಂಬಂಧವಿದೆ. ಅದು ಅತ್ಯುತ್ತಮವಾಗಿದ್ದರೆ ಕಕ್ಷಿದಾರನಿಗೆ ಬಹಳ ಸಹಾಯ ಆಗುತ್ತದೆ.
ಡಾ.ಬಾಬಾಸಾಹೇಬ ಅಂಬೇಡ್ಕರರು ನ್ಯಾಯಾಂಗಕ್ಕೆ ವಿಶೇಷವಾದ ಒತ್ತು ನೀಡಿದ್ದಾರೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಮಾತ್ರವಲ್ಲ. ಇದು ಎಪ್ಪತ್ತೈದು ವರ್ಷದ ಲೋಕತಂತ್ರದ ಆಚರಣೆ ಎಂದು ತಿಳಿಸಿದರು.

ವಕೀಲರ ಸಂಘಕ್ಕೆ ತನ್ನದೇಯಾದ ಕಟ್ಟಡ ಇರಬೇಕು ಅನ್ನೋ ಬೇಡಿಕೆ ಇತ್ತು. ಇವತ್ತು ನಾವೆಲ್ಲರೂ ಸೇರಿ ಅಡಿಗಲ್ಲು ಮಾಡಿದ್ದು ಸಂತೋಷದ ವಿಚಾರ. ಶಿಗ್ಗಾಂವಿ ಮತ್ತು ಸವಣೂರು ವಕೀಲರ ಸಂಘಕ್ಕೆ ಹಣ ಬಿಡುಗಡೆ ಮಾಡಿ ಅಡಿಗಲ್ಲು ಮಾಡಿದ್ದೇವೆ. ಮೂಲಭೂತ ಸೌಕರ್ಯಗಳಿಗೂ ನಮ್ಮ ಸರ್ಕಾರದಿಂದ ಸಹಕಾರ ಸಿಗಲಿದೆ. ವಕೀಲರಿಗೆ ಸಿಗಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡುತ್ತೇವೆ. ಆದಷ್ಟು ಬೇಗ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿ ಉದ್ಘಾಟನೆ ಮಾಡೋಣ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!