ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆ ಜಗತ್ತಿಗೆ ಧನಾತ್ಮಕವಾಗಲಿದೆ: ಐಎಂಎಫ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದ್ದು ಅಭಿವೃದ್ಧಿದರದಲ್ಲೂ ಏರಿಕೆಯಾಗುತ್ತದೆ. ಭಾರತದ ಈ ಬೆಳವಣಿಗೆಯು ಜಗತ್ತಿಗ ಧನಾತ್ಮಕವಾಗಿ ಪರಿಣಮಿಸಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯಸ್ಥೆ ಕ್ರಿಸ್ಟಿಲೀನಾ ಜಾರ್ಜೀವಾ ಹೇಳಿದ್ದಾರೆ.

ವಾಷಿಂಗ್ಟನ್‌ ನಲ್ಲಿ ನಡೆಯುತ್ತಿರುವ ವಾರ್ಷಿಕ ಶೃಂಗದಲ್ಲಿ ಮಾತನಾಡಿರುವ ಜಾರ್ಜೀವಾ “ಭಾರತವು ಅತಿ ಹೆಚ್ಚು ಅಭಿವೃದ್ಧಿ ದರದೊಂದಿಗೆ ಮುನ್ನಡೆಯುತ್ತಿದೆ. ಅತ್ಯಲ್ಪ ಪ್ರಮಾಣದಲ್ಲಿ ಕುಸಿತವಿದ್ದರೂ ಸಹ ಈ ವರ್ಷ 8.2 ರಷ್ಟು ಅಭಿವೃದ್ಧಿ ದರವನ್ನು ನಿರೀಕ್ಷಿಸಲಾಗಿದೆ. ಇದು ಕಡಿಮೆ ವೇಗದಲ್ಲಿ ಬೆಳೆಯುತ್ತಿರುವ ಜಗತ್ತಿಗೆ ಧನಾತ್ಮಕವಾಗಿ ಪರಿಣಮಿಸಲಿದೆ” ಎಂದು ಹೇಳಿದ್ದಾರೆ.

ಅವರು ಹೀಗೆನ್ನಲು ಕಾರಣವೂ ಇದೆ. ಪ್ರಸಕ್ತ ವರ್ಷದಲ್ಲಿ(2022) ಜಾಗತಿಕ ಅಭಿವೃದ್ಧಿ ದರವು 3.2 ರಷ್ಟಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯೇ. 2021 ರಲ್ಲಿ ಈ ದರವು 6.1 ರಷ್ಟಿತ್ತು. ಆದರೆ ಭಾರತದ ಅಭಿವೃದ್ಧಿದರವು ಇದರ ಎರಡಕ್ಕಿಂತ ಹೆಚ್ಚಿನ ಪಟ್ಟಿದೆ.

ಈ ಶೃಂಗದ ನಡುವಲ್ಲೇ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯಸ್ಥೆ ಜಾರ್ಜೀವಾ ಭಾರತದ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್‌ ರವರನ್ನು ಭೇಟಿ ಮಾಡಿ ಪ್ರಸ್ತುತ ಜಗತ್ತಿನ ರಾಜಕೀಯ ಪರಿಸ್ಥಿತಿ ಹಾಗೂ ಜಾಗತಿಕ ಆರ್ಥಿಕತೆಯ ಮೇಲೆ ಅದರ ಪರಿಣಾಮದ ಕುರಿತಾಗಿ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತದ ವಿತ್ತ ಸಚಿವರು ಕೊರೋನಾ ಸಾಂಕ್ರಾಮಿಕದ ನಂತರ ಆರ್ಥಿಕ ಚೇತರಿಕೆಗಾಗಿ ಭಾರತದಲ್ಲಿ ಕೈಗೊಂಡಿರುವ ರಚನಾತ್ಮಕ ಕ್ರಮಗಳು ಹಾಗೂ ವಿತ್ತೀಯ ನೀತಿಗಳಲ್ಲಿ ಮಾಡಿರುವ ಅಗತ್ಯ ಹೊಂದಾಣಿಕೆಗಳ ಬಗ್ಗೆ ಚರ್ಚೆಯಲ್ಲಿ ಉಲ್ಲೇಖಿಸಿದ್ದಾರೆ. ಜಾಗತಿಕ ಸಾಂಕ್ರಾಮಿಕದ ಮಧ್ಯದಲ್ಲಿಯೂ ಚೇತರಿಕೆ ಕಂಡಿರುವ ಭಾರತದ ಆರ್ಥಿಕ ನೀತಿಗಳ ಬಗ್ಗೆ ವಿಶ್ವ ಹಣಕಾಸು ಸಂಸ್ಥೆಯ ಮುಖ್ಯಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!