ಕಡಲಾಳದ ಸಂಪನ್ಮೂಲ ಅನ್ವೇಷಿಸೋಕೆ ಭಾರತದ ʼಸಮುದ್ರಯಾನʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಪ್ರಸ್ತುತ ಜಗತ್ತಿನಲ್ಲಿ ನೈಸರ್ಗಿಕ ಸಂಪನ್ಮೂಲಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಮಾನವನ ಸಂಶೋಧನೆಗಳಿಗೆಲ್ಲ ಮೂಲವಾಗಿರುವುದು ಈ ನೈಸರ್ಗಿಕ ಸಂಪನ್ಮೂಲಗಳೇ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ದೇಶವೊಂದು ಅಭಿವೃದ್ಧಿಯತ್ತ ಮುನ್ನುಗುತ್ತದೆ. ಭಾರತವೂ ಈಗ ಅದನ್ನೇ ಅನುಸರಿಸುತ್ತಿದ್ದು ಈಗ ತನ್ನ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಯ ಹಾದಿಯಲ್ಲಿ ಸಾಗುತ್ತ ಕಡಲಾಳದಲ್ಲಿ ಹುದುಗಿರುವ ಸಂಪನ್ಮೂಲಗಳ ಅನ್ವೇಷಣೆ ಮಾಡುವ ಹಂತಕ್ಕೆ ತಲುಪಿದೆ. ಭೂಮಂಡಲವನ್ನು ಮುಕ್ಕಾಲು ಭಾಗ ವ್ಯಾಪಿಸಿಕೊಂಡಿರೋ ಸಮುದ್ರಗಳು ತಮ್ಮ ಒಡಲಿನಲ್ಲಿ ಅಪಾರ ಪ್ರಮಾಣದ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿವೆ. ಈಗಾಗಲೇ ಅನೇಕ ದೇಶಗಳು ಇಂಥಹ ಸಂಪನ್ಮೂಲಗಳನ್ನು ಹುಡುಕಿ ಅವುಗಳನ್ನು ತಮ್ಮ ಅಗತ್ಯತೆಗೆ ಬಳಸಿಕೊಳ್ಳುತ್ತಿವೆ. ನೈಸರ್ಗಿಕ ಬದಲಾವಣೆಗಳಿಂದ ಹೇಗೆ ಭೂಮೇಲ್ಮೈನ ಅಡಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳು ಅಡಕವಾಗಿದೆಯೋ ಹಾಗೆಯೋ ಸಾಗರದಾಳದಲ್ಲಿಯೂ ಸಂಪನ್ಮೂಲಗಳು ಹೇರಳವಾಗಿವೆ. ಒಂದರ್ಥದಲ್ಲಿ ಹೇಳುವುದಾದರೆ ಖನಿಜ-ಲವಣಗಳು ಭೂಮೇಲ್ಮೈಗಿಂತ ಜಾಸ್ತಿ ಸಮುದ್ರದಾಳದಲ್ಲಿಯೇ ಇವೆ. ಇವುಗಳನ್ನು ಪತ್ತೆ ಹಚ್ಚಲು ಭಾರತ ಮುಂದಾಗಿದ್ದು ಅದಕ್ಕೆಂದೇ ವಿಶೇಷ ಯೋಜನೆಯನ್ನು ರೂಪಿಸಿದೆ.

ʼಸಮುದ್ರಯಾನʼ ಎಂಬ ವಿಶೇಷ ಮಿಷನ್‌ ಒಂದರವ ಮೂಲಕ ಭಾರತವು ಆಳವಾದ ಸಮುದ್ರ ಸಂಪನ್ಮೂಲಗಳನ್ನು ಅನ್ವೇಷಿಸಲು ಯೋಜಿಸುತ್ತಿದೆ. ಇದರ ಅಡಿಯಲ್ಲಿ ಭಾರತವು ʼಮತ್ಸ್ಯ-6000ʼ ಎಂಬ ಹೆಸರಿನ ಮುಳುಗುವಾಹನವನ್ನು ಕಳುಹಿಸುತ್ತಿದ್ದು ಮೂರುಜನ ಅನ್ವೇಷಕರು ಈ ವಾಹನ ಮೂಲಕ 6000ಮೀ.  ಸಮುದ್ರದಾಳಕ್ಕಿಳಿದು ಸಂಪನ್ಮೂಲಗಳನ್ನು ಅನ್ವೇಷಿಸಲಿದ್ದಾರೆ. “ಮಿಷನ್ ಸಮುದ್ರಯಾನವು 2026 ರ ವೇಳೆಗೆ ಸಾಕಾರಗೊಳ್ಳುವ ನಿರೀಕ್ಷೆಯಿದೆ” ಎಂದು ಕೇಂದ್ರ ಭೂ ವಿಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ಚೆನ್ನೈ ಮೂಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (ಎನ್‌ಐಒಟಿ) ‘ಮತ್ಸ್ಯ 6000’ ವಾಹನವನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುತ್ತಿದೆ. ಈ ವಾಹನದ ಮೂಲಕ ನಡೆಯಲಿರುವ ಮಾನವಸಹಿತ ಅನ್ವೇಷಣೆಯು ಸಮುದ್ರದಾಳದಲ್ಲಿರುವ ಕೋಬಾಲ್ಟ್, ಮ್ಯಾಂಗನೀಸ್ ಇತ್ಯಾದಿಯಾದ ಅಪರೂಪದ ಭೂಖನಿಜಗಳ ಅನ್ವೇಷಿಸಲು ಸಹಾಯಕವಾಗಲಿದೆ. ಅಲ್ಲದೇ ಸಂಪನ್ಮೂಲಗಳ ಹುಡುಕಾಟದ ಜೊತೆ ಜೀವವೈವಿಧ್ಯ ಮೌಲ್ಯಮಾಪನಕ್ಕಾಗಿಯೂ ಈ ಮಿಷನ್‌ ಪ್ರಾಮುಖ್ಯತೆ ವಹಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!