ಭಾರತದ ಭೇಟಿ ತುಂಬ ಸ್ಫೂರ್ತಿದಾಯಕ: ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಿಲ್​ ಗೇಟ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಮೈಕ್ರೋಸಾಫ್ಟ್​ ಸಹಸಂಸ್ಥಾಪಕ ಬಿಲ್​ ಗೇಟ್ಸ್​ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ವಿವಿಧ ವಿಷಯಗಳ ಕುರಿತು ಚರ್ಚಿಸಿದ್ದಾರೆ.

ಈ ವೇಳೆ ಭಾರತದ ಅಭೂತಪೂರ್ವ ಪ್ರಗತಿಯನ್ನು ಶ್ಲಾಘಿಸಿದ ಅವರು, ಭಾರತದ ನೂತನ ಆವಿಷ್ಕಾರಗಳು ಇಡೀ ಜಗತ್ತಿಗೆ ಅನುಕೂಲ ಮಾಡಿಕೊಡುತ್ತಿವೆ ಎಂದು ಹೇಳಿದ್ದಾರೆ.

ಪ್ರಧಾನಿ ಭೇಟಿ ನಂತರ ಬಿಲ್​ ಗೇಟ್ಸ್​ ಅವರು ತಮ್ಮ ಗೇಟ್ಸ್​ನೋಟ್ಸ್​ ಬ್ಲಾಗ್​ನಲ್ಲಿ ಕೂಡ ಭಾರತವನ್ನು ಹೊಗಳಿ ಬರೆದಿದ್ದಾರೆ. ಆರೋಗ್ಯ, ಹವಾಮಾನ ಸೇರಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಹೊಸ ಕಲ್ಪನೆಗಳಿಗೆ ತೆರೆದುಕೊಂಡು, ಆವಿಷ್ಕಾರಕ್ಕೆ ಒಡ್ಡಿಕೊಂಡು ಹೂಡಿಕೆ ಮಾಡಿದಾಗ ಏನು ಸಾಧನೆ ಮಾಡಬಹುದು ಎಂಬುದನ್ನು ಭಾರತ ತೋರಿಸಿದೆ.

ಕೊವಿಡ್​ 19 ಸಾಂಕ್ರಾಮಿಕದ ನಂತರ ನಾನು ಭಾರತಕ್ಕೆ ಭೇಟಿಕೊಟ್ಟೆ. ಈ ಭೇಟಿ ತುಂಬ ಸ್ಫೂರ್ತಿದಾಯಕವಾಗಿತ್ತು. ಹವಾಮಾನ ಬದಲಾವಣೆ, ಭಾರತದ ಆರೋಗ್ಯ ವ್ಯವಸ್ಥೆ, ಕೊವಿಡ್​ 19 ಲಸಿಕೆ ತಯಾರಿಕೆಯಲ್ಲಿ ಭಾರತದ ಮುಂದಾಳತ್ವ, ಗತಿ ಶಕ್ತಿ (ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ) ಯೋಜನೆ ಬಗ್ಗೆ ಪ್ರಧಾನಿ ಮೋದಿಯವರೊಂದಿಗೆ ಚರ್ಚೆ ನಡೆಸಿದೆ ಎಂದು ಬರೆದುಕೊಂಡಿದ್ದಾರೆ.

ಭಾರತ ಕೊವಿಡ್​ 19 ಲಸಿಕೆ ಅಭಿವೃದ್ಧಿ ಪಡಿಸಿ ಜಗತ್ತಿನಾದ್ಯಂತ ಕೋಟ್ಯಂತರ ಜನರ ಜೀವ ಕಾಪಾಡಿದೆ. ಈ ಲಸಿಕೆಯನ್ನು ಜನರಿಗೆ ಒದಗಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಕೊವಿನ್​ ಪೋರ್ಟಲ್​ ಅಭಿವೃದ್ಧಿಪಡಿಸಿದ್ದೂ ಕೂಡ ಶ್ಲಾಘನೀಯ. ಈ ಕೊವಿನ್​ (Co-Win)ಪೋರ್ಟಲ್​​ಗಳನ್ನು ಜಾಗತಿಕವಾಗಿ ಅಳವಡಿಸಿಕೊಳ್ಳಬೇಕು ಎಂದು ಬಿಲ್​ ಗೇಟ್ಸ್ ಹೇಳಿದ್ದಾರೆ. ಜಿ20 ಶೃಂಗದ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದ್ದನ್ನೂ ಬ್ಲಾಗ್​ನಲ್ಲಿ ಪ್ರಸ್ತಾಪಿಸಿದ ಅವರು ‘ಭಾರತ ತನ್ನ ನಾವೀನ್ಯತೆ, ಹೊಸ ಕಲ್ಪನೆಗಳನ್ನು ಜಗತ್ತಿಗೇ ಪಸರಿಸಲು ಈ ಜಿ20 ಶೃಂಗ ಒಂದು ಅದ್ಭುತ ಅವಕಾಶವಾಗಲಿದೆ ಎಂದರು.

ಭಾರತದ ಡಿಜಿಟಲ್​ ಐಡಿ ಆಧಾರ್ ಕಾರ್ಡ್​, ಪಾವತಿ ವ್ಯವಸ್ಥೆಯನ್ನು ಮೆಚ್ಚಿಕೊಂಡ ಅವರು, ಈ ಪರಿಕಲ್ಪನೆಯನ್ನು ಪಸರಿಸುವಲ್ಲಿ ಭಾರತದ ಕೇಂದ್ರ ಸರ್ಕಾರಕ್ಕೆ ಗೇಟ್ಸ್​ ಫೌಂಡೇಶನ್​ ಸಹಕಾರ ನೀಡಲಿದೆ ಎಂದು ಹೇಳಿದರು.

ಕ್ಷಯರೋಗ, ಕಾಲರಾ ಮತ್ತು ಇತರ ರೋಗಗಳ ನಿರ್ಮೂಲನೆಗೆ ಪ್ರಧಾನಿ ಮೋದಿಯವರು ತೆಗೆದುಕೊಂಡ ಉಪಕ್ರಮಗಳನ್ನು ಬಿಲ್​ ಗೇಟ್ಸ್​ ಹೊಗಳಿದರು. ಹಾಗೇ, ಕೊರೋನಾ ವೇಳೆಯಲ್ಲೂ ಶಿಕ್ಷಣ ನಿಲ್ಲಬಾರದು ಎಂಬ ಕಾರಣಕ್ಕೆ ಆನ್​ಲೈನ್​ ವ್ಯವಸ್ಥೆ ಜಾರಿಗೊಳಿಸಿದ್ದರ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಹವಮಾನ ವೈಪರೀತ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿ ಸರ್ಕಾರದ ಜತೆ ನಮ್ಮ ಫೌಂಡೇಶನ್​ ಕೆಲಸ ಮಾಡಲು ಉತ್ಸುಕವಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!