ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ಆಸ್ಪತ್ರೆಗಳ ಮುಂದೆ ಮತ್ತೆ ಜನ ಕ್ಯೂ ನಿಲ್ಲುವ ಪರಿಸ್ಥಿತಿ ಬಂದಿದೆ. ಬೆಂಗಳೂರಿನ ಜನರಿಗೆ ಉಸಿರಾಟಕ್ಕೆ ಸಂಬಂಧಿಸಿದ ಸೋಂಕುಗಳು ಬಾಧಿಸುತ್ತಿವೆ.
ಇದರ ಜೊತೆಗೆ ಕೊರೋನಾ ಕೇಸ್‌ಗಳು ಹಾಗೂ ಸೀಸನಲ್ ಇನ್ಫ್ಲೂಯೆನ್ಝಾ ಸೋಂಕಿನ ಕೇಸ್‌ಗಳು ಹೆಚ್ಚಾಗುತ್ತಿವೆ. ಮಳೆ, ಹವಾಮಾನದ ಏರಿಳಿತ ಹಾಗೂ ಶಾಲೆಗಳು ಪುನರಾರಂಭವಾಗಿರುವುದು ಸೋಂಕು ಹರಡುವಿಕೆಗೆ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ತಿಳಿಸಿದ್ದಾರೆ.
ರೋಗಿಗಳಿಗೆ ಶೀತ, ಗಂಟಲು ನೋವು, ಕೆಮ್ಮು ಇನ್ನಿತರ ಸಾಮಾನ್ಯ ಲಕ್ಷಣಗಳು ಕಾಣಿಸುತ್ತಿವೆ. ವೃದ್ಧರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವ ಜನರಿಗೆ ಮಾತ್ರ ಉಸಿರಾಟದ ತೊಂದರೆ ಆಗುತ್ತಿದೆ. ತೀವ್ರ ಲಕ್ಷಣಗಳಿರುವವರಿಗೆ ಮಾತ್ರ ಕೋವಿಡ್ ಮತ್ತು ಇನ್‌ಫ್ಲುಯೆನ್ಜಾ ಪರೀಕ್ಷೆ ನಡೆಸಲಾಗುತ್ತಿರುವುದರಿಂದ, ಸೌಮ್ಯ ಕೋವಿಡ್ ಸೋಂಕಿನ ಕೆಲವು ಪ್ರಕರಣಗಳು ಪತ್ತೆಯಾಗದೇ ಉಳಿಯುವ ಸಾಧ್ಯತೆಯೂ ಇದೆ ಎಂದು ಅವರು ತಿಳಿಸಿದ್ದಾರೆ.
ಇನ್‌ಫ್ಲುಯೆನ್ಜಾ ಎ ವೈರಸ್, ಅದರಲ್ಲೂ ಸ್ವೈನ್ ಫ್ಲೂ ಮತ್ತು H3N2 ತಳಿಗಳ ಸೋಂಕುಗಳು ಸದ್ಯ ಕೋವಿಡ್-19ಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿವೆ. ಮತ್ತೊಂದೆಡೆ, JN.1 ಕೋವಿಡ್ ರೂಪಾಂತರಿ ಇನ್ನೂ ಹರಡುತ್ತಿದ್ದರೂ, ಅದು ಒಮಿಕ್ರಾನ್ ಮಾದರಿಯಂತೆಯೇ ಸೌಮ್ಯ ಲಕ್ಷಣಗಳನ್ನು ಹೊಂದಿದೆ. ಕಳೆದ ಕೆಲವು ವಾರಗಳಿಂದ ಇನ್‌ಫ್ಲುಯೆನ್ಜಾ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಿವೆ. ಪ್ರತಿದಿನ ಸುಮಾರು 10 ರಿಂದ 15 ಇನ್‌ಫ್ಲುಯೆನ್ಜಾ ಪ್ರಕರಣಗಳು ವರದಿಯಾಗುತ್ತಿವೆ ಎಂದು ವೈದ್ಯರು ಹೇಳ್ತಿದ್ದಾರೆ.



