ipl 2022 | ಪ್ಲೇ ಆಫ್‌ ಪ್ರವೇಶಿಸುತ್ತಾ ಆರ್‌ಸಿಬಿ; ಇಲ್ಲಿದೆ ಲೆಕ್ಕಾಚಾರ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್‌ ನಿರ್ಣಾಯಕ ಘಟ್ಟದಲ್ಲಿ ಬಂದು ನಿಂತಿದೆ. ಪ್ರಥಮಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿ ಸಲೀಸಾಗಿ ಪ್ಲೇ ಆಫ್‌ ಪ್ರವೇಶಿಸುವ ಭರವಸೆ ನೀಡಿದ್ದ ಆರ್ಸಿಬಿ ದ್ವಿತೀಯಾರ್ಧದಲ್ಲಿ ಸತತ ಸೋಲುಗಳನ್ನು ಕಂಡು ಪ್ಲೇ ಆಫ್‌ ಪ್ರವೇಶಿಸಲು ಒದ್ದಾಡುತ್ತಿದೆ. ಪ್ರಸ್ತುತ 12 ಪಂದ್ಯಗಳಲ್ಲಿ 7 ಜಯ ಸಾಧಿಸಿ 14 ಅಂಕಗಳಿಸುವ ಮೂಲಕ ಅಂಕಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿರುವ ಆರ್ಸಿಬಿಗೆ ಮುಂದಿನ ಎರಡೂ ಪಂದ್ಯಗಳು ಮಹತ್ವಪೂರ್ಣದ್ದಾಗಿರಲಿದೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್‌ ಟೈಟಾನ್ಸ್‌ ಹಾಗೂ ಕೆ.ಎಲ್‌ ರಾಹುಲ್‌ ನಾಯಕತ್ವದ ಲಕ್ನೋ ಸೂಪರ್ಜೈಂಟ್ಸ್‌ ಆಡಿರುವ ತಲಾ 11 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದು 16 ಅಂಕಗಳನ್ನು ಕಲೆಹಾಕುವ ಮೂಲಕ ಪ್ಲೇ ಆಫ್‌ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿವೆ. ಆ ತಂಡಗಳಿಗೆ ಇನ್ನೂ 3 ಪಂದ್ಯಗಳಿದ್ದು ಕನಿಷ್ಠ 1 ಪಂದ್ಯವನ್ನು ಗೆದ್ದರು ಅಂಕಗಳಿಕೆ 18ಕ್ಕೆ ತಲುಪಲಿದ್ದು ಸುಲಭಕ್ಕೆ ಪ್ಲೇ ಆಫ್‌ ಪ್ರವೇಶಿಸಲಿದ್ದಾರೆ.
ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ 11 ಪಂದ್ಯಗಳಿಂದ 14 ಅಂಕಗಳನ್ನು ಹೊಂದಿದೆ. ಪಿಂಕ್ ಬ್ರಿಗೇಡ್‌ಗೆ 3 ಪಂದ್ಯಗಳು ಬಾಕಿ ಇದ್ದು, ಕನಿಷ್ಠ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಅಗ್ರ 4 ರಲ್ಲಿ ಸ್ಥಾನ ಪಡೆಯಲಿದೆ. +0.342 ಧನಾತ್ಮಕ ರನ್‌ ರೇಟ್‌ ಹೊಂದಿರುವುದು ತಂಡಕ್ಕೆ ಪ್ಲಸ್‌ ಪಾಯಿಂಟ್.‌
ಇನ್ನು ಕ್ರಮವಾಗಿ 5, 6,7 ನೇ ಸ್ಥಾನದಲ್ಲಿರುವ ಡೆಲ್ಲಿ, ಸನ್‌ ರೈಸರ್ಸ್‌, ಪಂಜಾಬ್‌ ಕಿಂಗ್ಸ್‌ ತಲಾ 11 ಪಂದ್ಯಗಳನ್ನಾಡಿ 6 ಪಂದ್ಯಗಳಲ್ಲಿ ಸೋತು 5 ಪಂದ್ಯಗಳಲ್ಲಿ ಗೆದ್ದು 10 ಅಂಕ ಕಲೆಹಾಕಿವೆ. ಈ ತಂಡಗಳು ಮುಂದಿನ ಮೂರೂ ಪಂದ್ಯಗಳನ್ನು ಗೆದ್ದರೂ ಪ್ಲೇ ಆಫ್‌ ಪ್ರವೇಶಿಸುವುದು ಕಷ್ಟಸಾಧ್ಯ. ಆರ್ಸಿಬಿ ಅಥವಾ ರಾಜಸ್ಥಾನ ಸೋತರೆ ಅಷ್ಟೇ ಈ ತಂಡಗಳಿಗೆ ಪ್ಲೇ ಆಫ್‌ ಬಾಗಿಲು ತೆರೆಯುತ್ತದೆ.
ಅಲ್ಲಿಗೆ ಲೆಕ್ಕಾಚಾರಗಳು ಸ್ಪಷ್ಟವಾಗಿದೆ. ಆರ್ಸಿಬಿ ಮುಂದಿನ ಪಂದ್ಯಗಳಲ್ಲಿ ಪಂಜಾಬ್‌ ಹಾಗೂ ಗುಜರಾತ್‌ ಟೈಟಾನ್ಸ್‌ ತಂಡಗಳನ್ನು ಎದುರಿಸಲಿದೆ. ಆ ಎರಡೂ ತಂಡಗಳ ವಿರುದ್ಧ ಗೆದ್ದರೆ ತಂಡದ ಅಂಕ 18ಕ್ಕೇರಲಿದೆ. ಹಾಗಾದಲ್ಲಿ ತಂಡ ಪ್ಲೇ ಆಫ್‌ ಪ್ರವೇಶಿಸಲಿದೆ. ಒಂದು ಪಂದ್ಯದಲ್ಲಿ ಸೋತರೂ ಪ್ಲೇ ಆಫ್‌ ಅವಕಾಶ ಕಮರುತ್ತಿದೆ. ತಂಡ ಅತ್ಯಂತ ಕೆಟ್ಟ ರನ್‌ ರೇಟ್‌ (-0.115) ಹೊಂದಿದ್ದು ಲೆಕ್ಕಾಚಾರಗಳ ಪ್ರಕಾರ 16 ಅಂಕ ಕಲೆಹಾಕಿದರೂ ಪ್ಲೇ ಆಫ್‌ ಪ್ರವೇಶ ಅಸಾಧ್ಯವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!