ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ತಂಡದ ಅನುಭವಿ ಆಟಗಾರ ರೋಹಿತ್ ಶರ್ಮಾ ಅವರ ಗಾಯದ ಸಮಸ್ಯೆಯ ನಡುವೆಯೇ, ತಂಡವು ಈಗ ಅಧಿಕೃತವಾಗಿ ಬದಲಿ ಆಟಗಾರನ ಹೆಸರನ್ನು ಘೋಷಿಸಿದೆ.
ಮೊಣಕಾಲಿನ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿರುವ ಅಥರ್ವ ಅಂಕೋಲೆಕರ್ ಅವರ ಸ್ಥಾನಕ್ಕೆ, 21 ವರ್ಷದ ಯುವ ಆಲ್‌ರೌಂಡರ್ ಕ್ರಿಶ್ ಭಗತ್ ಅವರನ್ನು ಮುಂಬೈ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದೆ. ದೇಶೀಯ ಕ್ರಿಕೆಟ್‌ನಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸುವ ಕ್ರಿಶ್, ಉತ್ತಮ ವೇಗದ ಬೌಲರ್ ಹಾಗೂ ಕೆಳ ಕ್ರಮಾಂಕದ ಉಪಯುಕ್ತ ಬ್ಯಾಟರ್ ಕೂಡ ಹೌದು. ಕಳೆದ ಎರಡು ವರ್ಷಗಳಿಂದ ಮುಂಬೈ ತಂಡದ ಟ್ರಯಲ್ಸ್‌ನಲ್ಲಿದ್ದ ಇವರು, ಡಿವೈ ಪಾಟೀಲ್ ಕಪ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡುವ ಮೂಲಕ ತಂಡದ ಗಮನ ಸೆಳೆದಿದ್ದರು.
ಹಾರ್ದಿಕ್ ಪಾಂಡ್ಯ ಸಾರಥ್ಯದ ಮುಂಬೈ ಇಂಡಿಯನ್ಸ್ ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಹಿಂದೆ ಬಿದ್ದಿದೆ. ಇದರ ನಡುವೆ ರೋಹಿತ್ ಶರ್ಮಾ ಅವರ ಫಿಟ್ನೆಸ್ ಕಳವಳ ಮೂಡಿಸಿದ್ದು, ಇಂದಿನ ಪಂಜಾಬ್ ಕಿಂಗ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಅವರು ಆಡುವುದು ಅನುಮಾನ ಎನ್ನಲಾಗಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಈ ರೋಚಕ ಪಂದ್ಯದಲ್ಲಿ ಹೊಸ ಬದಲಾವಣೆಗಳೊಂದಿಗೆ ಮುಂಬೈ ತಂಡ ಮತ್ತೆ ಗೆಲುವಿನ ಹಳಿಗೆ ಮರಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.



