ದಿವಾಳಿಯಾಗ್ತಿರೋ ಪಾಕಿಸ್ತಾನದ ಮೇಲೆ ಇರಾನ್‌ನಿಂದ 18 ಬಿಲಿಯನ್‌ ದಂಡ ವಿಧಿಸುವ ಬೆದರಿಕೆ !

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪಾಕಿಸ್ತಾನವು ಸದ್ಯಕ್ಕೆ ತೊಂದರೆಗಳಿಂದ ವಿಮುಕ್ತಿ ಹೊಂದುವಂತೆ ಕಾಣುತ್ತಿಲ್ಲ. ಏಕೆಂದರೆ ಶತಕೋಟಿ ಡಾಲರ್ ಅನಿಲ ಪೈಪ್‌ಲೈನ್ ಯೋಜನೆಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಬೇಕು, ಇದು ಸಾಧ್ಯವಾಗದಿದ್ದಲ್ಲಿ 18 ಬಿಲಿಯನ್‌ ದಂಡವನ್ನು ತೆರಬೇಕು ಎಂದು ಇರಾನ್‌ ಪಾಕಿಸ್ತಾನಕ್ಕೆ ತಾಕೀತು ಮಾಡಿದೆ.

ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಇರಾನ್‌ನ ಇಂಧನ ಸಚಿವಾಲಯವು ತನ್ನ ಭೂಪ್ರದೇಶದಲ್ಲಿ ಇರಾನ್-ಪಾಕಿಸ್ತಾನ ಗ್ಯಾಸ್ ಪೈಪ್‌ಲೈನ್ ಯೋಜನೆಯ ಒಂದು ಭಾಗವನ್ನು ನಿರ್ಮಿಸಲು ಫೆಬ್ರವರಿ-ಮಾರ್ಚ್ 2024 ರ ಗಡುವನ್ನು ನೀಡಿದೆ ಅಥವಾ ಭಾರೀ ದಂಡವನ್ನು ಪಾವತಿಸಬೇಕಾದೀತು ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

ಇರಾನ್ ಈಗಾಗಲೇ ಪೈಪ್‌ಲೈನ್‌ನ ತಮ್ಮ ಭಾಗದ ನಿರ್ಮಾಣ ಕೆಲಸವನ್ನು ಪೂರ್ಣಗೊಳಿಸಿದೆ. ಈ ಯೋಜನೆಯು ಇರಾನ್‌ನ ಪಶ್ಚಿಮದಲ್ಲಿರುವ ಅನಿಲ ಕ್ಷೇತ್ರಗಳಿಂದ ಅದರ ಪೂರ್ವ ನೆರೆಯ ಪಾಕಿಸ್ತಾನದವರೆಗೆ ವ್ಯಾಪಿಸಿದೆ.

ಇರಾನ್ ಮೇಲಿರುವ ಅಮೆರಿಕದ ನಿರ್ಬಂಧಗಳಿಂದಾಗಿ ಪೈಪ್‌ಲೈನ್ ಯೋಜನೆಯ ನಿರ್ಮಾಣವನ್ನು ಪೂರ್ಣಗೊಳಿಸಲು ಪಾಕಿಸ್ತಾನವು ತನ್ನ ಅಸಮರ್ಥತೆಯನ್ನು ಪದೇ ಪದೇ ವ್ಯಕ್ತಪಡಿಸುತ್ತಿದೆ.

ಶಾಂತಿ ಯೋಜನೆ ಎಂದೂ ಕರೆಯಲ್ಪಡುವ ಇರಾನ್-ಪಾಕಿಸ್ತಾನ ಪೈಪ್‌ಲೈನ್ ಯೋಜನೆಯು ಆರಂಭದಲ್ಲಿ ಭಾರತವನ್ನೂ ಒಳಗೊಂಡಿತ್ತು. ಪಾಕಿಸ್ತಾನದ ಮೂಲಕ ಹಾದುಹೋಗುವ ಪೈಪ್‌ಲೈನ್ ಮೂಲಕ ಭಾರತಕ್ಕೆ ಇರಾನ್ ಅನಿಲವನ್ನು ರಫ್ತು ಮಾಡುವ ಯೋಜನೆ ಇದಾಗಿತ್ತು. 1700 ಮೈಲುಗಳವರೆಗೆ ವಿಸ್ತರಿಸಿದ 7.5 ಬಿಲಿಯನ್ ನಿರ್ಮಾಣ ಯೋಜನೆಯು ದಕ್ಷಿಣ ಪಾರ್ಸ್ ಅನಿಲ ಕ್ಷೇತ್ರದಿಂದ ಬಲೂಚಿಸ್ತಾನ್ ಮೂಲಕ ಭಾರತಕ್ಕೆ ಅನಿಲವನ್ನು ತರುವುದಾಗಿತ್ತು. ಮೂರು ದೇಶಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಆದಾಗ್ಯೂ ಭದ್ರತಾ ಕಾಳಜಿ ಮತ್ತು ಪಾಕಿಸ್ತಾನವು ವಿಧಿಸುವ ಹೆಚ್ಚಿನ ಸುಂಕದ ಕಾರಣದಿಂದ ಭಾರತವು ಒಪ್ಪಂದದಿಂದ ಹಿಂದೆಸರಿದಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!