ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಚಿತ್ರರಂಗದಲ್ಲಿ ಸಿನಿಮಾ ಟಿಕೆಟ್ ದರ, ಪ್ರದರ್ಶನಗಳ ಸಮಯ ಹಾಗೂ ಲಾಭದ ಹಂಚಿಕೆ ಕುರಿತಾದ ವಿವಾದಗಳು ದಿನದಿಂದ ದಿನಕ್ಕೆ ಕಾವೇರುತ್ತಿವೆ. ಸದ್ಯದ ನಿಯಮಗಳ ಪ್ರಕಾರ, ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆಯಾಗುವಾಗ ಮಾತ್ರ ಸರ್ಕಾರದಿಂದ ವಿಶೇಷ ಅನುಮತಿ ಪಡೆದು ಟಿಕೆಟ್ ದರವನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಆದರೆ, ಈ ತಾರತಮ್ಯ ನೀತಿಯಿಂದ ಬೇಸತ್ತಿರುವ ಚಿತ್ರ ನಿರ್ಮಾಪಕರು, ತಮ್ಮ ಸಿನಿಮಾಗಳ ಟಿಕೆಟ್ ಬೆಲೆಯನ್ನು ತಾವೇ ಮುಕ್ತವಾಗಿ ನಿರ್ಧರಿಸುವ ಸ್ವಾತಂತ್ರ್ಯ ನೀಡಬೇಕೆಂದು ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳಿಗೆ ಜಂಟಿ ಒತ್ತಾಯ ಹೇರಿದ್ದಾರೆ.
ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಿಗೆ ಹೊಸ ಬೆಲೆ ನಿಗದಿ?
ಚಿತ್ರೋದ್ಯಮದ ಮೂಲಗಳ ಪ್ರಕಾರ, ಪ್ರಮುಖವಾಗಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಕನಿಷ್ಠ 150 ರೂ. ನಿಂದ ಗರಿಷ್ಠ 300 ರೂ. ವರೆಗೆ ಟಿಕೆಟ್ ದರವನ್ನು ಸ್ವತಂತ್ರವಾಗಿ ನಿಗದಿಪಡಿಸಿಕೊಳ್ಳುವ ಹಕ್ಕನ್ನು ನಿರ್ಮಾಪಕರಿಗೆ ನೀಡಲು ಉಭಯ ಸರ್ಕಾರಗಳು ಚಿಂತನೆ ನಡೆಸಿವೆ. ಇದರಿಂದ ನಿರ್ಮಾಪಕರು, ವಿತರಕರು ಹಾಗೂ ಚಿತ್ರಮಂದಿರಗಳ ಮಾಲೀಕರಿಗೆ ಆರ್ಥಿಕ ಅನುಕೂಲವಾಗಲಿದೆ ಎಂಬುದು ಉದ್ಯಮದ ಲೆಕ್ಕಾಚಾರವಾಗಿದೆ.
ಹಳೇ ಕಹಿ ನೆನಪು: ಸರ್ಕಾರದ ಮುಂದಿರುವ ಸವಾಲು
ಹಿಂದೆ ತೆಲಂಗಾಣದಲ್ಲಿ ಬಿಆರ್‌ಎಸ್ ಸರ್ಕಾರವಿದ್ದಾಗ ಇಂತಹದ್ದೇ ಮುಕ್ತ ಅವಕಾಶ ನೀಡಲಾಗಿತ್ತು. ಆದರೆ, ಸಣ್ಣ ಬಜೆಟ್ ಸಿನಿಮಾಗಳ ನಿರ್ಮಾಪಕರು ಸಹ ಗರಿಷ್ಠ ಮಟ್ಟದ ದರವನ್ನೇ ನಿಗದಿಪಡಿಸಿದ್ದರಿಂದ ಪ್ರೇಕ್ಷಕರು ಚಿತ್ರಮಂದಿರಗಳಿಂದ ದೂರ ಸರಿದರು. ಇದು ಸಿನಿಮಾಗಳ ಸೋಲಿಗೆ ಮತ್ತು ಸರ್ಕಾರದ ಮೇಲಿನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ತದನಂತರ ಬಂದ ಕಾಂಗ್ರೆಸ್ ಸರ್ಕಾರ ಈ ನಿಯಮವನ್ನು ರದ್ದುಗೊಳಿಸಿತು. ಪ್ರಸ್ತುತ ಆಂಧ್ರ ಮತ್ತು ತೆಲಂಗಾಣದಲ್ಲಿ ಸರ್ಕಾರದ ಮುಂಚಿತ ಅನುಮತಿ ಕಡ್ಡಾಯವಾಗಿದ್ದು, ಈಗ ಮತ್ತೆ ಹಳೇ ನಿಯಮಕ್ಕಾಗಿ ಒತ್ತಡ ಶುರುವಾಗಿದೆ.



