ಕೊಡಗಿನ ಪ್ರವಾಸಿ ಕೇಂದ್ರಗಳಾಗುತ್ತಿವೆಯೇ ಕೊರೋನಾ ಹಾಟ್ ಸ್ಪಾಟ್?

ಹೊಸದಿಗಂತ ವರದಿ, ಕೊಡಗು:

ವೀಕೆಂಡ್ ಕರ್ಪ್ಯೂ ನಡುವೆಯೂ ಜಿಲ್ಲೆಯಲ್ಲಿ ದಿನೇದಿನೇ ಕೊರೋನಾ ಪಾಸಿಟಿವಿಟಿ ಪ್ರಮಾಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಕೆಲವು ರೆಸಾರ್ಟ್ ಸಿಬ್ಬಂದಿಗಳಲ್ಲಿ, ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಪ್ರವಾಸೋದ್ಯಮ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಕುತ್ತಾಗುವ ಸಾಧ್ಯತೆಯಿದೆ.

ಕೊಡಗು ಜಿಲ್ಲೆಯನ್ನು ವೀಕೆಂಡ್ ಕರ್ಪ್ಯೂವಿನಿಂದ ಹೊರಗಿಡುವಂತೆ ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ ಜಿಲ್ಲಾಡಳಿತ ಹಾಗೂ ಸರಕಾರವನ್ನು ಒತ್ತಾಯಿಸುತ್ತಲೇ ಬಂದಿದೆ. ಆದರೆ ಇದೀಗ ಜಿಲ್ಲೆಯ ಕೆಲವು ರೆಸಾರ್ಟ್ ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವುದನ್ನು ಗಮನಿಸಿದರೆ ಪ್ರವಾಸೋದ್ಯಮದಿಂದಲೇ ಜಿಲ್ಲೆಯಲ್ಲಿ ಕೊರೋನಾ ಹೆಚ್ಚುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ.
ಹೊಸ ವರ್ಷಾಚರಣೆಗೆ ಸರಕಾರ ನಿರ್ಬಂಧ ವಿಧಿಸಿದ್ದರೂ, ಕೊಡಗಿನ ಬಹುತೇಕ ರೆಸಾರ್ಟ್ ಹಾಗೂ ಹೋಂಸ್ಟೇಗಳು ಸರಕಾರದ ಆದೇಶ ಹೊರಬೀಳುವ ಮುನ್ನವೇ ಭರ್ತಿಯಾಗಿದ್ದವು. ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ನಡೆಯದಿದ್ದರೂ ಬಹುತೇಕ ರೆಸಾರ್ಟ್ ಆವರಣಗಳಲ್ಲಿ ಹೊಸ ವರ್ಷವನ್ನು ಭರ್ಜರಿಯಾಗಿಯೇ ಬರಮಾಡಿಕೊಳ್ಳಲಾಗಿತ್ತು. ಇದೀಗ ಕೆಲವು ರೆಸಾರ್ಟ್ ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ಗೋಚರಿಸುತ್ತಿರುವುದಕ್ಕೆ ಇದೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಮಡಿಕೇರಿ ನಗರದ ಹೊರವಲಯದ ಮೇಕೇರಿಯಲ್ಲಿರುವ ರೆಸಾರ್ಟ್ ಒಂದರಲ್ಲೇ ಸುಮಾರು 30ಕ್ಕೂ ಅಧಿಕ ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಅದೇರೀತಿ ಸೋಮವಾರಪೇಟೆ ಸಮೀಪದ ರೆಸಾರ್ಟ್ ಒಂದರ ಸಿಬ್ಬಂದಿಗಳಲ್ಲೂ ಕೋವಿಡ್ ಸೋಂಕು ಗೋಚರಿಸಿದೆ. ವೀಕೆಂಡ್ ಕರ್ಪ್ಯೂ ನಡುವೆಯೂ ಜಿಲ್ಲೆಗೆ‌ ಪ್ರವಾಸಿಗರ ದಂಡು ಹರಿದು ಬರುತ್ತಿದ್ದು, ಇದು ಜಿಲ್ಲೆಯಲ್ಲಿ ಸೋಂಕು ಅಧಿಕವಾಗಲು ಕಾರಣವಾಗುತ್ತಿದೆ.

ಅಧಿಕಾರಿಗಳ ನಿರ್ಲಕ್ಷ್ಯ:
ಕೊಡಗು ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಬಳಿಕ ರೆಸಾರ್ಟ್ ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ಹೆಚ್ಚಾಗಿ ಭಾದಿಸುತ್ತಿದೆ. ಆದರೂ ರೆಸಾರ್ಟ್’ಗಳನ್ನು ಮಾತ್ರ ಅಧಿಕಾರಿಗಳು ಸೀಲ್‍ಡೌನ್ ಮಾಡುತ್ತಿಲ್ಲ. ಹೋಂಸ್ಟೇ ರೆಸಾಟ್೯ಗಳಲ್ಲಿ ಕೋವಿಡ್ ಸೋಂಕು ಕಂಡು ಬಂದರೆ ಅವುಗಳನ್ನು‌ ಸೀಲ್ ಡೌನ್ ಮಾಡುವಂತೆ ಶುಕ್ರವಾರವಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಿದ್ದರು.

ಆದರೆ ಮಡಿಕೇರಿ ತಾಲೂಕಿನ ಮೇಕೇರಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೂರ್ಗ್ ವೈಲ್ಡರ್ಸ್ ರೆಸಾರ್ಟ್’ನ 31 ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದ್ದರೂ, ರೆಸಾರ್ಟ್ ಸೀಲ್‌ಡೌನ್‌ ಆಗಿಲ್ಲ. ಬದಲಾಗಿ ಸೋಂಕು ದೃಢಪಟ್ಟಿರುವ ಸಿಬ್ಬಂದಿಯನ್ನು ಮಾತ್ರ ಪ್ರತ್ಯೇಕವಾಗಿರಿಸಿ ರೆಸಾರ್ಟ್ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.

ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್ ಅವರು ರೆಸಾರ್ಟ್ ಸೀಲ್‌ಡೌನ್‌ ಮಾಡುವಂತೆ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಆದರೆ ಸ್ಥಳಕ್ಕೆ ತೆರಳಿದ ಮಡಿಕೇರಿ ತಹಶೀಲ್ದಾರ್ ಮಹೇಶ್, ಸೋಂಕಿತ ರೆಸಾರ್ಟ್ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿರುವ ಸ್ಥಳಕ್ಕಷ್ಟೇ ಹೋಗಿ ಪರಿಶೀಲನೆ ನಡೆಸಿ ವಾಪಾಸಾಗಿರುವುದು ಸಂಶಯಕ್ಕೆ ಎಡೆ ಮಾಡಿದೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್ ಮಹೇಶ್, ಕೋವಿಡ್ ಸೋಂಕಿತ ಸಿಬ್ಬಂದಿಯನ್ನು ಪ್ರತ್ಯೇಕವಾಗಿರಿಸಲಾಗಿದೆ. ರೆಸಾರ್ಟ್ ಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ. ಸೋಂಕಿತರನ್ನು ಏಳು ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಲಾಗುವುದು. ಬಳಿಕ ಅವರಿಗೆ ಮತ್ತೊಮ್ಮೆ ಕೋವಿಡ್ ಪರೀಕ್ಷೆ ಮಾಡಲಾಗುವುದು. ಆಗಲೂ ಪಾಸಿಟಿವ್ ಬಂದರೆ ನಿಯಮದಂತೆ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

ಸಾರ್ವಜನಿಕರ ಅಸಮಾಧಾನ:
ತಹಶೀಲ್ದಾರ್ ಅವರ ಈ ನಡೆಗೆ ಸಾರ್ವಜನಿಕರೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೊರೋನಾ ಸೋಂಕು ಪತ್ತೆಯಾದ ಮನೆಗಳನ್ನು ಸೀಲ್ ಡೌನ್ ಮಾಡುವ ಅಧಿಕಾರಿಗಳು, ನೂರಾರು ಮಂದಿ ನಮಧು ಹೋಗುವ ರೆಸಾರ್ಟ್, ಹೋಂಸ್ಟೇಗಳನ್ನು ಸೀಲ್ ಡೌನ್ ಮಾಡುತ್ತಿಲ್ಲವೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ರೆಸಾರ್ಟ್ ಮಾಜಿ ಸಚಿವರೊಬ್ಬರ ಪುತ್ರನಿಗೆ ಸೇರಿರುವುದರಿಂದ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲವೇ ಎಂಬ ಸಂಶಯವೂ ಮೂಡಿದೆ. ಇದಕ್ಕೆ ಜಿಲ್ಲಾಡಳಿತವೇ ಉತ್ತರ ನೀಡಬೇಕಾಗಿದೆ.

ಮಾಸ್ಕ್-ಸಾಮಾಜಿಕ ಅಂತರವಿಲ್ಲ:
ಇನ್ನೊಂದೆಡೆ ಕೊಡಗಿಗೆ ಹೊರ ರಾಜ್ಯ-ಜಿಲ್ಲೆಗಳಿಂದ ಆಗಮಿಸುತ್ತಿರುವ ಪ್ರವಾಸಿಗರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಓಡಾಡುತ್ತಿರುವುದು ಕಂಡು ಬರುತ್ತಿದೆ. ಆದರೆ ಇದನ್ನು ನಿಯಂತ್ರಿಸುವವರೇ ಇಲ್ಲವಾಗಿದೆ. ಮಡಿಕೇರಿ ನಗರದಲ್ಲಿ ಒಂದೆರಡು ದಿನ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಮೂಲಕ ಪೊಲೀಸರು ಬಿಸಿ ಮುಟ್ಟಿಸಿದರಾದರೂ, ಇದೀಗ ಎಲ್ಲೂ ಈ ಪ್ರಕ್ರಿಯೆ ಗೋಚರಿಸುತ್ತಿಲ್ಲ. ಬಸ್’ಗಳಲ್ಲೂ ಮಾಸ್ಕ್ ಧರಿಸದೆ ಪ್ರಯಾಣಿಕರು ಸಂಚರಿಸುತ್ತಿದ್ದು, ನಿರ್ವಾಹಕರು ಕಂಡೂ ಕಾಣದಂತಿರುತ್ತಾರೆ. ಇನ್ನು ಪ್ರವಾಸಿ ತಾಣಗಳಲ್ಲಂತೂ ಪ್ರವಾಸಿಗರ ಸ್ವಚ್ಛಂದ ವಿಹಾರಕ್ಕೆ ತಡೆಯೇ ಇಲ್ಲದಂತಾಗಿದೆ.ಮಾಸ್ಕ್ ಧರಿಸದಿದ್ದರೂ,‌ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೂ ಇದನ್ನು ಗಮನಿಸುವವರಾಗಲಿ, ಪ್ರಶ್ನಿಸುವವರಾಗಲಿ ಇಲ್ಲವೇ ಇಲ್ಲ! ಇದರಿಂದಾಗಿ ಕೊಡಗಿನ ಪ್ರವಾಸಿತಾಣಗಳು ಕೋವಿಡ್ ಹಾಟ್ ಸ್ಪಾಟ್’ಗಳಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!