ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿರಾಟ್ ಕೊಹ್ಲಿ ಅವರಂತಹ ಕ್ರಿಕೆಟಿಗರು ಪೀಳಿಗೆಗೆ ಒಮ್ಮೆ ಬರುತ್ತಾರೆ ಮತ್ತು ಭಾರತೀಯ ಕ್ರಿಕೆಟ್ ಅವರನ್ನು ಪಡೆಯಲು ಅದೃಷ್ಟ ಮಾಡಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಣ್ಣಿಸಿದೆ.
ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿರುವ ವಿರಾಟ್ ಕೊಹ್ಲಿ ಅವರ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ, ಟೆಸ್ಟ್ ಕ್ರಿಕೆಟ್‌ನಲ್ಲಿನಾಯಕನಾಗಿ ಅದ್ಭುತ ಕೊಡುಗೆ ನೀಡಿರುವ ಕೊಹ್ಲಿಯನ್ನು ಶ್ಲಾಘಿಸಿದೆ.
‘ಟೀಂ ಇಂಡಿಯಾದ ಟೆಸ್ಟ್ ನಾಯಕನಾಗಿ ಅತ್ಯುತ್ತಮ ವೃತ್ತಿಜೀವನ ಹೊಂದಿರುವ ಕೊಹ್ಲಿಯನ್ನು ಬಿಸಿಸಿಐ ಅಭಿನಂದಿಸುತ್ತದೆ. ನಾಯಕತ್ವದ ಪಾತ್ರದಿಂದ ಹಿಂದೆ ಸರಿಯುವ ಅವರ ನಿರ್ಧಾರವನ್ನು ಬಿಸಿಸಿಐ ಮತ್ತು ಆಯ್ಕೆ ಸಮಿತಿಯು ಗೌರವಿಸುತ್ತದೆ ಎಂದಿದೆ.
ಕೊಹ್ಲಿ ನಾಯಕತ್ವ ಬಿಟ್ಟಿರಬಹುದು ಆದರೆ ಅವರು ಆಟಗಾರನಾಗಿ ತಮ್ಮ ಕೊಡುಗೆಯನ್ನು ಮುಂದುವರಿಸುತ್ತಾರೆ ಮತ್ತು ಭಾರತೀಯ ಕ್ರಿಕೆಟ್ ಹೆಚ್ಚಿನ ಎತ್ತರವನ್ನು ತಲುಪಲು ಸಹಾಯ ಮಾಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸವನ್ನು ಹೊಂದಿದೆ.
ವಿರಾಟ್ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ. ಎಂಎಸ್ ಧೋನಿ ಬಳಿಕ ಅಧಿಕಾರ ವಹಿಸಿಕೊಂಡ ನಂತರ, ಅವರು 68 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿ 40 ಪಂದ್ಯಗಳನ್ನು ಗೆಲ್ಲುವಂತೆ ಮಾಡಿದ್ದಾರೆ.
ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ 2018ರಲ್ಲಿ ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್ ಸರಣಿ ಗೆದ್ದು ಇತಿಹಾಸ ಬರೆದಿತ್ತು. ವೆಸ್ಟ್ ಇಂಡೀಸ್‌ನಲ್ಲಿಯೂ ಸರಣಿ ಗೆದ್ದು ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಪಡೆಯಿತು.
ಅದೇ ರೀತಿ 2021ರಲ್ಲಿ ಐಸಿಸಿ ವರ್ಲ್ಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೆ ಭಾರತವನ್ನು ತಲುಪಿಸಿದ್ದಾರೆ. ಅವರು ನಾಯಕನಾಗಿ ತವರಿನಲ್ಲಿ ಆಡಿದ 31 ಟೆಸ್ಟ್‌ಗಳಲ್ಲಿ 24 ಪಂದ್ಯಗಳನ್ನು ಗೆದ್ದಿರುವ ದಾಖಲೆಯನ್ನು ಕೊಹ್ಲಿ ಹೊಂದಿದ್ದಾರೆ ಎಂದು ಬಿಸಿಸಿಐ ಹೇಳಿದೆ.
ಸೌರವ್ ಗಂಗೂಲಿ ಹೇಳಿದ್ದೇನು
ವಿರಾಟ್ ಕೊಹ್ಲಿ ವೈಯಕ್ತಿಕವಾಗಿ ಈ ನಿರ್ಧಾರ ಪ್ರಕಟಿಸಿದ್ದಾರೆ. ಭವಿಷ್ಯದಲ್ಲಿ ಭಾರತ ತಂಡದ ಸಾಧನೆಯನ್ನು ಎತ್ತರಕ್ಕೆ ಒಯ್ಯುವಲ್ಲಿ ಕೊಹ್ಲಿ ಪಾತ್ರ ಹೆಚ್ಚಾಗಿರಲಿದೆ. ಈ ಹಿಂದೆಯೂ ಅವರ ನಾಯಕತ್ವದಲ್ಲಿ ಭಾರತ ತಂಡ ಶ್ರೇಷ್ಠ ಪ್ರದರ್ಶನ ತೋರಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಕೊಹ್ಲಿ ಒಬ್ಬ ಶ್ರೇಷ್ಠ ಆಟಗಾರ. ತಮ್ಮ ಉತ್ತಮ ನಾಯಕತ್ವ ಗುಣದಿಂದ ತಂಡ ಸಾಕಷ್ಟು ಸಾಧನೆ ಮಾಡುವಂತೆ ಮಾಡಿದ್ದಾರೆ. ಅವರನ್ನು ಬಿಸಿಸಿಐ ಅಭಿನಂದಿಸುತ್ತದೆ. 68 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿ 40 ಗೆಲುವಿನ ಕಾಣಿಕೆ ನೀಡಿದ್ದು ಶ್ರೇಷ್ಠ ಸಾಧನೆಯೇ ಸರಿ ಎಂದು ಬಣ್ಣಿಸಿದ್ದಾರೆ.