May 10, 2026
Sunday, May 10, 2026
spot_img

ನೋಯ್ಡಾ ಗಲಭೆಯ ಹಿಂದೆ ಪಾಕ್ ಕೈವಾಡ? ಪೊಲೀಸ್ ತನಿಖೆಯಲ್ಲಿ ಸ್ಪೋಟಕ ಅಂಶ ಬಯಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆಯುತ್ತಿರುವ ಕಾರ್ಮಿಕರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, 40,000ಕ್ಕೂ ಹೆಚ್ಚು ಕಾರ್ಖಾನೆ ಕಾರ್ಮಿಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು, ಸುಮಾರು 350 ಜನರನ್ನು ಬಂಧಿಸಲಾಗಿದೆ .ಇದರ ಬೆನ್ನಲ್ಲೇ ಯೋಜಿತ ಗಲಭೆಯ ಹಿಂದೆ ಪಾಕಿಸ್ತಾನದ ಕೈವಾಡದ ಶಂಕೆಯೂ ಇದೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿದ ಕಾರ್ಮಿಕ ಸಚಿವ ಅನಿಲ್ ರಾಜಭರ್, ಈ ಘಟನೆಯ ಹಿಂದೆ ದೊಡ್ಡ ಪಿತೂರಿ ಇರುವುದು ಸಾಬೀತಾಗಿದೆ. ಹೀಗಾಗಿ ಪಾಕಿಸ್ತಾನದ ನಂಟಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದಕ್ಕೆ ಪುಷ್ಟಿ ನಿಡುವಂತೆ ಇತ್ತೀಚೆಗೆ ಮೀರಠ್ ಮತ್ತು ನೋಯ್ಡಾದಲ್ಲಿ ಪಾಕಿಸ್ತಾನದ ಜೊತೆ ಸಂಪರ್ಕ ಇರುವ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಈ ಹಿನ್ನಲೆಯಲ್ಲಿ, ಪ್ರತಿಭಟನೆಯ ಹಿಂದೆ ಪ್ರಚೋದನೆಯ ಕೈವಾಡದ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ ಎಂದು ಸಚಿವರು ಹೇಳಿದ್ದಾರೆ.

ನೋಯ್ಡಾದಲ್ಲಿ ಹನ್ನೆರಡು ಗಂಟೆಗಳ ಕಾಲ ಕೆಲಸ ಮಾಡಿದರೂ ಕೇವಲ 11,000ರಿಂದ 15,000 ರುಪಾಯಿ ವೇತನ ನೀಡಲಾಗುತ್ತಿದೆ. ಹೀಗಾಗಿ ಕನಿಷ್ಠ 20,000 ರಿಂದ 25,000 ರುಪಾಯಿ ವೇತನ ನೀಡಬೇಕು ಎಂದು ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ಶುರುಮಾಡಿದ್ದು, ಈ ವೇಳೆ, ಕಿಡಿಗೇಡಿಗಳು, ಕಲ್ಲುತೂರಾಟವನ್ನು ನಡೆಸಿ, ಇದ್ದಕ್ಕಿದ್ದಂತೆ ವಾಹನಗಳಿಗೆ ಬೆಂಕಿ ಹಚ್ಚಲು ಆರಂಭಿಸಿದರು.ಇದರಿಂದ ಪ್ರತಿಭಟನೆಯ ಆಶಯವೇ ದಿಕ್ಕು ತಪ್ಪಿದೆ .

ಸದ್ಯ ಪೊಲೀಸರು ಬಂಧಿಸಲಾಗಿರುವವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ವಾಟ್ಸಪ್‌ ಗ್ರೂಪ್‌ ಮಾಡಿ ಕ್ಯೂಆರ್‌ ಕೋಡ್‌ ಮೂಲಕ ಪ್ರತಿಭಟನಾಕಾರರನ್ನು ಒಂದುಗೂಡಿಸಲಾಗಿತ್ತು. ಜೊತೆಗೆ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ತೀವ್ರಗೊಳಿಸಲು ಪ್ರಚೋದನಕಾರಿ ಭಾಷಣ, ಸಂದೇಶಗಳನ್ನ ಈ ಗ್ರೂಪ್‌ಗಳಲ್ಲಿ ಹರಿಬಿಡಲಾಯಿತು. ಈ ಮೂಲಕ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತು. ಇತ್ತ ವಾಟ್ಸಾಪ್ ಗ್ರೂಪ್’ನಲ್ಲಿ ಸ್ಥಳೀಯ ಕಾರ್ಮಿಕರು ಅಡ್ಮಿನ್’ಗಳಾಗಿ ಇರಲಿಲ್ಲ. ಬದಲಾಗಿ ಹೊರಗಿನಿಂದ ಬಂದ ವ್ಯಕ್ತಿಗಳು ಇದನ್ನು ನಿರ್ವಹಿಸುತ್ತಿದ್ದಾರೆ. ಪ್ರತಿಭಟೆನೆಯ ವೇಳೆ, ಸರ್ಕಾರೀ ಬಸ್ಸುಗಳಿಗೆ, ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಲು ಇವರೇ ಪ್ರಚೋದಿಸಿರುವುದು ಎಂದು ತನಿಖೆಯ ವೇಳೆ ಬಹಿರಂಗಗೊಂಡಿದೆ.

ಸದ್ಯದಲ್ಲೇ ಗಲಭೆಯ ಹಿಂದಿನ ಮಾಸ್ಟರ್’ಮೈಂಡ್ ಗಳನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ನೋಯ್ಡಾದಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !