ಕಾಂಗ್ರೆಸ್ ಧ್ವಜ ಕಾಣದ ಪೈಲಟ್ ಪ್ರತಿಭಟನಾ ಜಾಥಾ ಕೈ ವಿರುದ್ಧ ಬಂಡಾಯದ ಸೂಚನೆಯೇ ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ತಾನ ಕಾಂಗ್ರೆಸ್ ಸರಕಾರದಲ್ಲಿನ ಆಂತರಿಕ ಬಿಕ್ಕಟ್ಟು ಉಲ್ಬಣಗೊಂಡಿದ್ದು, ಪ್ರಮುಖ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅಜ್ಮೀರ್‌ನಿಂದ ‘ಜನಸಂಘರ್ಷ ಯಾತ್ರೆ’ ಆರಂಭಿಸಿದ್ದಾರೆ. ಈ ಮೂಲಕ ಅವರು ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಕಾಂಗ್ರೆಸ್ ಹೈಕಮಾಂಡ್‌ನ್ನು ಬಿಕ್ಕಟ್ಟಿಗೆ ಸಿಲುಕಿಸಿರುವುದಾಗಿ ಹೇಳಲಾಗಿದೆ.

ಪೈಲಟ್ ಅವರ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಧ್ವಜಗಳು ಕಂಡುಬರದಿರುವುದು ಕಾಂಗ್ರೆಸ್ ಪಾಳಯದಲ್ಲಿ ತಳಮಳಕ್ಕೆ ಕಾರಣವಾಗಿದೆ.ಇದರ ಹಿಂದಿರುವ ಕಾರಣ ಏನು ಎಂಬ ಬಗ್ಗೆ ಈಗ ಚರ್ಚೆಗಳು ನಡೆಯುತ್ತಿದ್ದು, ಈ ಪ್ರತಿಭಟನೆಯ ಮೂಲಕ 2024ರ ಲೋಕಸಭಾ ಚುನಾವಣೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭ ರಾಜ್ಯ ರಾಜಕೀಯದಲ್ಲೇ ಹೊಸ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

ಪ್ರಶ್ನೆ ಪತ್ರಿಕೆ ಹಗರಣ ವಿರುದ್ಧ ಕಿಡಿ
ಅಜ್ಮೀರ್‌ನಲ್ಲಿ ಜೈಪುರ ಹೆದ್ದಾರಿಯ ಮೇಲೆ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಪೈಲಟ್, ರಾಜಸ್ತಾನದಲ್ಲಿ ಸರಕಾರಿ ಉದ್ಯೋಗ ನೇಮಕಾತಿಗಳಿಗಾಗಿ ಏರ್ಪಡಿಸಲಾಗಿದ್ದ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವುದು ಮತ್ತು ಈ ಹಗರಣದ ವಿರುದ್ಧ ಪೈಲಟ್ ಧ್ವನಿ ಎತ್ತಿರುವುದು ರಾಜಸ್ತಾನ ಕಾಂಗ್ರೆಸ್ ಸರಕಾರಕ್ಕೆ ತೀವ್ರ ಇರಿಸುಮುರಿಸುಂಟು ಮಾಡಿದೆ. ಇದು ಯುವಜನರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ವಿಫಲವಾಗಿದೆ ಎಂಬುದನ್ನು ಎತ್ತಿತೋರಿದ ಪೈಲಟ್ ನಡೆ ಕಾಂಗ್ರೆಸ್ ಸರಕಾರಕ್ಕೀಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಇದು ಪೈಲಟ್ ಮತ್ತು ಸಿಎಂ ಅಶೋಕ್ ಗೆಹ್ಲೋಟ್ ನಡುವಣ ತಿಕ್ಕಾಟದ ಮುಂದುವರಿದ ಭಾಗವೆಂದು ಹೇಳಲಾಗಿದೆ.

ಪೈಲಟ್ ಅವರ ನಡೆಯಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸಿಗೆ ತೀವ್ರ ಹೊಡೆತ ಬೀಳುವ ಅಪಾಯವಿದೆ ಎಂಬುದಾಗಿ ವಿಶ್ಲೇಷಿಸಲಾಗುತ್ತಿದ್ದು, ಈಗಾಗಲೇ ಗೆಹ್ಲೋಟ್ ಸರಕಾರ ಪೈಲಟ್ ಬೆಂಬಲಿಗರನ್ನು ವಿವಿಧ ಹುದ್ದೆಗಳಿಂದ ತೆಗೆದುಹಾಕಿರುವುದು ಪೈಲಟ್ ಅವರ ಆಕ್ರೋಶ ಹೆಚ್ಚಿಸಿದೆ ಎನ್ನಲಾಗಿದೆ.ಪೈಲಟ್ 5 ದಿನಗಳ ಕಾಲ 125ಕಿ.ಮೀ.ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಕಳೆದ ತಿಂಗಳು ಪೈಲಟ್ ಒಂದು ದಿನದ ನಿರಶನ ಸತ್ಯಾಗ್ರಹ ಕೈಗೊಂಡಿರುವುದು ಕೂಡ ಕಾಂಗ್ರೆಸ್ ಸರಕಾರಕ್ಕೆ ಪೇಚನ್ನುಂಟು ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!