ಹೊಟ್ಟೆಕಿಚ್ಚಿನಿಂದ ಸಂಸದರನ್ನೇ ಗುರಿ ಮಾಡುವುದು ಸಲ್ಲ: ಸುಮಲತಾ ಅಂಬರೀಶ್

ಹೊಸದಿಗಂತ ವರದಿ,ಮಂಡ್ಯ:

ನರೇಗಾ ಎಂದರೆ ಏನು ಎಂಬುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಅದರಲ್ಲಿ ಯಾವ ಕೆಲಸಗಳಿವೆ ಎನ್ನುವುದು ಜನಸಾಮಾನ್ಯರಿಗೆ ಗೊತ್ತಿಲ್ಲ, ಕೆಲವರು ಹೊಟ್ಟೆಕಿಚ್ಚಿನಿಂದ ಸಂಸದರನ್ನೇ ಗುರಿ ಮಾಡುವುದು ಸರಿಯಲ್ಲ ಎಂದು ಸಂಸದೆ ಸುಮಾಲತಾ ಅಂಬರೀಷ್ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ಅವರನ್ನು ಶುಕ್ರವಾರ ಭೇಟಿ ಮಾಡಿ ನರೇಗಾ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದರು.
ನರೇಗಾದಲ್ಲಿ ಏನೇನು ಮಾಡಿಸ ಬಹುದು ಎಂಬುವುದರ ನಿರ್ಧಾರವು ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಪಿಡಿಒಗಳದ್ದಾಗಿರುತ್ತದೆ. ನಾವು ಅವರನ್ನು ಕೇಳಬಹುದು. ಜೊತೆಗೆ ಕೆಲಸ ಎಲ್ಲಿ ಆಗಬೇಕು ಎಂಬುವುದನ್ನು ತಿಳಿಸಬಹುದಷ್ಟೇ, ದಿಶಾ ಸಭೆಯಲ್ಲಿ ನಂರ್ಬ ಒನ್ ಇದ್ದಾರೆ, ನರೇಗಾದಲ್ಲಿ ಹಿಂದಿದ್ದಾರೆ ಸಂಸದರು ಎಂದು ಹೇಳುವುದೇ ತಪ್ಪು ಕಲ್ಪನೆ ಎಂದು ಪ್ರತಿಪಾದಿಸಿದರು.
ಜಿಲ್ಲೆಯು ನರೇಗಾದಲ್ಲಿ 2019ರ ತನಕವೂ ನಾಲ್ಕನೇ ಸ್ಥಾನದಲ್ಲಿತ್ತು, ಆದರೆ ಕೋವಿಡ್ ಸಂದರ್ಭದಲ್ಲಿ ಸ್ವಲ್ಪ ಅಡೆತಡೆಯಾಗಿದೆ, ಮುಂದಿನ ದಿನಗಳಲ್ಲಿ ನರೇಗಾ ಬಗ್ಗೆ ಅಭಿವೃದ್ಧಿ ಸಾಧಿಸುವ ಭರವಸೆ ಇದೆ. ಪ್ರಸ್ತುತದಲ್ಲಿ ಎಂಎಲ್ಸಿ ಎಲೆಕ್ಷನ್, ಮಳೆ ಹಾವಳಿ ಹೆಚ್ಚಾಗಿದ್ದರಿಂದ ಕಷ್ಟವಾಗಿದೆ. ಮಾರ್ಚ್ವರೆಗೂ ಸಮಯವಿದೆ. 31 ಸ್ಥಾನದಿಂದ 29ನೇ ಸ್ಥಾನಕ್ಕೆ ಕಳೆದ ಒಂದು ತಿಂಗಳಿಂದೀಚೆಗೆ ಡೆವಲೆಪ್ ಆಗಿದೆ. ಮುಂದಿನ ದಿನಗಳಲ್ಲಿ ಟಾಪ್ 10ನೇ ಸ್ಥಾನಕ್ಕೆ ಬರುತ್ತೇವೆ ಎಂದರು.
ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾದ ಹಿನ್ನಲೆಯಲ್ಲಿ ಪಿಡಿಒಗಳನ್ನು ಅಮಾನತು ಮಾಡಲಾಗಿದೆ. ಪಂಚಾಯಿತಿ ಅಭಿವೃದ್ಧಿ ಮಾಡುವುದು ಅಷ್ಟೇ ಅವರ ಕೆಲಸವಾಗಿದೆ. ಸರ್ಕಾರದ ಸಂಬಳ ತೆಗೆದುಕೊಳ್ಳುವುದಕ್ಕೆ ತಕ್ಕವಾಗಿ ಕೆಲಸ ಮಾಡಬೇಕು. ಯಾವುದೇ ಅಧಿಕಾರಿಗಳನ್ನು ಅಮಾನತುಗೊಳಿಸುವ ಅಥವಾ ವರ್ಗಾವಣೆ ಮಾಡುವ ಅಧಿಕಾರ ಸಂಸದರಿಗೆ ಇರುವುದಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರು ಬಂದಾಗ ಅಧಿಕಾರಿಗಳು ಬರುತ್ತಾರೆ, ಆದರೆ ಸಂಸದರ ಕಾರ್ಯಕ್ರಮ ಎಂದರೆ ಅವರಿಗೆ ಭಯವಿಲ್ಲ, ಇನ್ನೂ ಜನಸಾಮನ್ಯರ ಜೊತೆ ಹೇಗೆ ವರ್ತಿಸುತ್ತಾರೆ ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!