ಕೊಡಗು| ಸಹಕಾರ ಸಂಘಗಳ ಕಾಯ್ದೆಗಳನ್ನು ತಿಳಿಯುವುದು ಅಗತ್ಯ: ಮನುಮುತ್ತಪ್ಪ

ಹೊಸದಿಗಂತ ವರದಿ, ಕೊಡಗು:
ಸಹಕಾರ ಸಂಘಗಳ ಚುನಾವಣೆಗಳು ಸಕಾಲಿಕ ಮತ್ತು ಪಾರದರ್ಶಕವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಕಾನೂನು ಕಾಯ್ದೆಗಳು ರಚಿತವಾಗಿದ್ದು, ಅದರಲ್ಲಿರುವ ಅಂಶಗಳನ್ನು ಪ್ರತಿಯೊಬ್ಬ ಸಹಕಾರಿಯೂ ತಿಳಿಯುವುದು ಅವಶ್ಯಕ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಹಕಾರ ಚುನಾವಣೆ ಕುರಿತು ಏರ್ಪಡಿಸಲಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ತತ್ವಗಳಲ್ಲಿ ಪ್ರಜಾಸತ್ತಾತ್ಮಕ ಸದಸ್ಯ ನಿಯಂತ್ರಣ ಎಂಬುದು ಸದಸ್ಯರು ಸದಸ್ಯರಿಗಾಗಿ ಇರುವುದೆಂಬುದನ್ನು ನಿರೂಪಿಸುತ್ತದೆ. ಸಹಕಾರ ಸಂಘಗಳಲ್ಲಿ ಅಂತಿಮ ಅಧಿಕಾರ ವಾರ್ಷಿಕ ಮಹಾಸಭೆಯಲ್ಲಿ ನೆಲೆಸಿರುತ್ತದೆ. ಸಹಕಾರ ಸಂಘಗಳ ನೀತಿ ರೂಪಿಸುವಲ್ಲಿ ಮತ್ತು ನಿರ್ಣಯ ಮಾಡುವ ಪ್ರಕ್ರಿಯೆಗಳಲ್ಲಿ ಸದಸ್ಯರು ಸಕ್ರಿಯವಾಗಿ ಭಾಗವಹಿಸುವುದರಿಂದ ಸಂಘದ ಉದ್ದೇಶಗಳು ಸಫಲವಾಗುತ್ತವೆ ಎಂದರು.
ಸಹಕಾರ ಸಂಘದ ಉದ್ದೇಶಗಳ ಸಾಧನೆಗಾಗಿ ಅಗತ್ಯ ನಿರ್ದೇಶನ ನೀಡುವುದಕ್ಕಾಗಿ ನಿರ್ದಿಷ್ಟ ಸಂಖ್ಯೆಯ ನಿರ್ದೇಶಕರನ್ನು ಹೊಂದಿರಲು ಸಹಕಾರ ಕಾಯ್ದೆ ಮತ್ತು ನಿಯಮಗಳು ಮತ್ತು ಉಪ ವಿಧಿಗಳಲ್ಲಿ ಅವಕಾಶ ನೀಡಲಾಗಿದೆ. ಚುನಾವಣೆಗಳು ನಿಯಮಾನುಸಾರ ನಡೆದಲ್ಲಿ ಮಾತ್ರ ಸಿಂಧುವಾಗುತ್ತದೆ ಎಂದು ಅವರು ನುಡಿದರು.
ಸಹಕಾರ ಚುನಾವಣೆಗಳು ಪ್ರಾರಂಭಿಕ ಹಂತದಿಂದ ಕೊನೆಯ ಹಂತದವರೆಗೆ ಪರಿಶುದ್ಧತೆಯಿಂದ ನಿಖರವಾಗಿ ಪಾರದರ್ಶಕವಾಗಿ ಮತ್ತು ಸಕಾಲಿಕವಾಗಿ ನಡೆಯಬೇಕೆಂಬುದು ಕಾನೂನಿನ ಆಶಯವಾಗಿದೆ ಎಂದರು.
ಸಂಘದ ಮುಖ್ಯ ಕಾರ್ಯ ನಿರ್ವಾಹಕರು ಕಾಯ್ದೆ ಮತ್ತು ನಿಯಮಗಳಲ್ಲಿ ಆಗುವ ಬದಲಾವಣೆಗಳ ಕುರಿತು ಆಡಳಿತ ಮಂಡಳಿಯವರಿಗೆ ಮಾಹಿತಿಯನ್ನು ತಲುಪಿಸಿದಲ್ಲಿ ಪ್ರಕ್ರಿಯೆಗಳು ಸಮರ್ಪಕವಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ಎ.ಕೆ.ಮನುಮುತ್ತಪ್ಪ ಅವರು ನುಡಿದರು.
ಈ ಸಂದರ್ಭದಲ್ಲಿ ಸಹಕಾರ ಸಂಘಗಳ ಉಪ ನಿಬಂಧಕ ಸಲೀಂ ಅವರು ಸಹಕಾರ ಚುನಾವಣಾ ಪ್ರಕ್ರಿಯೆ ನಡೆಸುವ ಕುರಿತು ಉಪನ್ಯಾಸ ನೀಡಿದರು. ಯೂನಿಯನ್ ನಿರ್ದೇಶಕರಾದ ರವಿ ಬಸಪ್ಪ, ಕನ್ನಂಡ ಸಂಪತ್, ಕೆ.ಎಂ.ತಮ್ಮಯ್ಯ, ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಈ.ಮೋಹನ್ ಮತ್ತಿತರರು ಇದ್ದರು. ವ್ಯವಸ್ಥಾಪಕಿ ಆರ್.ಮಂಜುಳಾ ಪ್ರಾರ್ಥಿಸಿದರೆ, ಸಿಇಒ ಯೋಗೇಂದ್ರ ನಾಯಕ್ ಅವರು ಸ್ವಾಗತಿಸಿ,ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!