November 24, 2026
Tuesday, November 24, 2026
spot_img

ಮುಂದುವರಿದ ಆಶಾ ಕಾರ್ಯಕರ್ತೆಯರ ಪ್ರತಿಭಟನೆ: ಈವರೆಗೂ 18 ಮಂದಿ ಅಸ್ವಸ್ಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಅನ್ನಾಹಾರದ ಕೊರತೆ, ಶೌಚಾಲಯ ಸಮಸ್ಯೆ, ಚಳಿಯ ತೀವ್ರತೆಯಿಂದಾಗಿ ಈವರೆಗೂ 18 ಮಂದಿ ಅಸ್ವಸ್ಥರಾಗಿದ್ದಾರೆ.

ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ಆಶಾ ಕಾರ್ಯಕರ್ತೆಯರು ಚಳಿ, ಬಿಸಿಲು, ಹಗಲು, ರಾತ್ರಿ ಎಲ್ಲವನ್ನೂ ಮೀರಿ ನಿಂತಿದ್ದಾರೆ. ಮಕ್ಕಳ ಸಮೇತ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದು, ಕೊರೆಯುವ ಚಳಿಯನ್ನು ಲೆಕ್ಕಿಸದೇ ರಾತ್ರಿ ಕಳೆಯುತ್ತಿದ್ದಾರೆ. ಫುಟ್‌ಪಾತ್‌ ಮೇಲೆಯೇ ಆಶಾ ಕಾರ್ಯಕರ್ತೆಯರು ದಿನವಿಡೀ ಕಳೆಯುತ್ತಿದ್ದು, ರಾತ್ರಿಯ ಚಳಿಗೆ ನಡುಗಿ ಹೋಗಿದ್ದಾರೆ. ಆದರೆ ಸಾವು ಬಂದರೂ ಸರಿಯೇ ನಾವು ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸರ್ಕಾರದೊಂದಿಗೆ ಈಗಾಗಲೇ ಮೂರು ಸುತ್ತಿನ ಮಾತುಕತೆ ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮಾತುಕತೆ ವಿಫಲವಾದ ಹಿನ್ನೆಲೆ ಪ್ರತಿಭಟನೆಯನ್ನ ಅನಿರ್ದಿಷ್ಟಾವಧಿಗೆ ವಿಸ್ತರಿಸಲು ಆಶಾ ಕಾರ್ಯಕರ್ತೆಯರು ನಿರ್ಧರಿಸಿದ್ದಾರೆ.

ನಿನ್ನೆ ಪ್ರತಿಭಟನಾಕಾರರು ಬೃಹತ್‌ ಮಾನವ ಸರಪಳಿ ನಿರ್ಮಿಸಿವಿನೂತನವಾಗಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ರು. ಆದರೆ, ಸರ್ಕಾರದಿಂದ ಬೇಡಿಕೆಗಳಿಗೆ ಸ್ಪಷ್ಟ ಭರವಸೆ ಸಿಗದ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿರುವ ಕಾರ್ಯಕರ್ತೆಯರು, ಬೇಡಿಕೆ ಈಡೇರುವವರೆಗೂ ಫ್ರೀಡಂ ಪಾರ್ಕ್ ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ. ಬೇಡಿಕೆ ಈಡೇರುವ ಸಮಯ ಯಾವಾಗ ಬರುತ್ತದೋ ಗೊತ್ತಿಲ್ಲ. ಅಲ್ಲಿಯವರೆಗೂ ನಾವು ಇರುತ್ತೇವೋ ಗೊತ್ತಿಲ್ಲ ಎಂದು ಆಶಾ ಕಾರ್ಯಕರ್ತೆಯರು ಕಣ್ಣೀರಿಟ್ಟಿದ್ದಾರೆ. ಚಳಿಯಿಂದಾಗಿ ಶೀತ, ಜ್ವರ, ತಲೆನೋವು, ಗಂಟಲುನೋವು, ಕೆಮ್ಮು, ಹೊಟ್ಟೆನೋವು, ಬಿಪಿ, ಶುಗರ್‌, ಮೈಕೈ ನೋವು ಬಾಧಿಸುತ್ತಿದೆ.

Must Read