Friday, March 24, 2023

Latest Posts

“ಅಭಿವೃದ್ಧಿ ನಿಷೇಧಿತ ಪ್ರದೇಶಗಳನ್ನೂ ಬಂದರು ವ್ಯಾಪ್ತಿಗೊಳಪಡಿಸುವುದು ಅವೈಜ್ಞಾನಿಕ”

ಹೊಸದಿಗಂತ ವರದಿ ಹೊನ್ನಾವರ:

ಜಿಲ್ಲೆಯ ಕರಾವಳಿ ತೀರಗಳಲ್ಲಿನ ಸಮುದ್ರದ ಉಬ್ಬರ ರೇಖೆಯ 50 ಮೀಟರ್ ವ್ಯಾಪ್ತಿಯ ಅಭಿವೃದ್ಧಿ ನಿಷೇಧಿತ ಭೂಪ್ರದೇಶವನ್ನು ಬಂದರಿನ ವ್ಯಾಪ್ತಿಗೆ ಒಳಪಡಿಸಿದ ಸರ್ಕಾರದ ಇತ್ತೀಚಿನ ಕ್ರಮವು ತೀರ ಅವೈಜ್ಞಾನಿಕ ಮತ್ತು ಜನವಿರೋಧಿ ಕ್ರಮವಾಗಿದೆ ಎಂದು ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ತಮ್ಮ ತೀವ್ರ ಆತಂಕವನ್ನು ವ್ಯಕ್ತಪಡಿಸಿದ್ದಾರೆ .

ಅಭಿವೃದ್ಧಿಯ ಹೆಸರಿನಲ್ಲಿ ಕಡಲ ತೀರಗಳನ್ನು ಖಾಸಗಿ ಭಂಡವಾಳಶಾಹಿಗಳಿಗೆ ದೀರ್ಘಾವಧಿಗೆ ಗುತ್ತಿಗೆ ನೀಡಿ ಮೀನುಗಾರರನ್ನು ಸಮುದ್ರತೀರಗಳಿಂದ ಒಕ್ಕಲೆಬ್ಬಿಸುವ ವ್ಯವಸ್ಥಿತ ಹುನ್ನಾರ ನಡೆಯುತ್ತಿರುವ ಶಂಕೆ ಇದೆ ಎಂದರು.

ಬಂದರು ಇಲಾಖೆ ಇತ್ತೀಚೆಗೆ ಕಾಸರಕೋಡಿನಲ್ಲಿ ನಡೆಸಿದ ಕೆಲವು ಕಾರ್ಯಾಚರಣೆ ಇದಕ್ಕೆ ಪುರಾವೆ ಒದಗಿಸಿದೆ ಎಂದಿರುವ ಅವರು, ಇನ್ನು ನದಿ ಮತ್ತು ದ್ವೀಪ ಪ್ರದೇಶವು ಭರತರೇಖೆಯಿಂದ 50 ಮೀಟರ್ ಭೂಪ್ರದೇಶವನ್ನು ಸಹ ಬಂದರಿನ ಮಿತಿಯೊಳಗಿದೆ ಎಂದು ಸರ್ಕಾರ ಗುರುತಿಸಿದೆ. ಅಂತಹ ನಕ್ಷೆಗೆ ಕೇಂದ್ರದ ಎನ್ ಸಿಎಸ್ ಸಿ ಎಮ್ ಅನುಮತಿ ನೀಡಿರುವುದು ಆಶ್ಚರ್ಯ ತಂದಿದೆ ಎಂದರು.

ಇದು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಲವು ಸಮಸ್ಯೆಗಳ ಹುಟ್ಟಿಗೆ ಕಾರಣವಾಗಲಿದೆ. ಮನೆ ನಿರ್ಮಾಣವು ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಜನರು ಇನ್ನು ಮುಂದೆ ಪರಿಸರ ಮತ್ತು ಬಂದರು ಇಲಾಖೆ ಸೇರಿದಂತೆ ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು.

ಸರ್ಕಾರದ ಇಂತಹ ನಡೆಯು ಮುಂದೆ ಮೀನುಗಾರರು ಮತ್ತು ನದಿಪಾತ್ರದ ರೈತರಿಗೆ ಮಾರಕವಾಗುವ ಅಪಾಯ ಇದೆ. ಈ ಹುನ್ನಾರದ ವಿರುದ್ಧ ಕರಾವಳಿಯ ಮೀನುಗಾರರು ಮತ್ತು ರೈತರು ಪಕ್ಷಾತೀತವಾಗಿ ಸಂಘಟಿತರಾಗಿ ಪ್ರತಿಭಟಿಸಬೇಕು ಎಂದು ಚಂದ್ರಕಾಂತ ಕೊಚರೇಕರ ಕರೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!