ಹೊಸದಿಗಂತ ವರದಿ, ಮಡಿಕೇರಿ:
ಬುಧವಾರ ಮಧ್ಯಾಹ್ನ ಕೊಡಗು-ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಭಾಗವಾದ ಕೂಜಿಮಲೆ ಎಸ್ಟೇಟ್’ನಲ್ಲಿ ಕಾಣಿಸಿಕೊಂಡಿರುವ ಮಹಿಳೆಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.
ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಹಿಳೆಯೊಬ್ಬರು ಕೂಜಿಮಲೆ ಎಸ್ಟೇಟ್‌ನಲ್ಲಿ ಕಾಣಿಸಿಕೊಂಡಿದ್ದು, ಆಕೆ ನಕ್ಸಲ್ ಆಗಿರಬಹುದು ಎಂದು ಎಸ್ಟೇಟ್ ಕಾರ್ಮಿಕರು ಮತ್ತು ಮ್ಯಾನೇಜರ್ ಭಾವಿಸಿದ್ದರು. ಆದರೆ ವಾಸ್ತವವಾಗಿ ಅವಳು ಅಸ್ವಸ್ಥ ವ್ಯಕ್ತಿಯಂತೆ ತೋರುತ್ತಿದ್ದಾಳೆ.
ಕೆಲವು ಹಿಂದಿ ಉಪಭಾಷೆಯನ್ನು ಮಾತನಾಡುವ ಆಕೆ ತಾನು ರಾಜಸ್ಥಾನದವಳು ಎಂದು ತಿಳಿಸಿದ್ದು, ಪ್ರಸಕ್ತ ಆಕೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ವಶದಲ್ಲಿದ್ದಾಳೆ ಮತ್ತು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಆಶ್ರಮಕ್ಕೆ ಕಳುಹಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಎಸ್ಟೇಟ್’ಗೆ ಬಂದಿದ್ದ ಮಹಿಳೆ ನಕ್ಸಲ್ ಇರಬಹುದು ಎಂಬ ಸಂದೇಹದ ಕಾರಣ ಎಎನ್‌ಎಫ್ ತಂಡ ಹಾಗೂ ಕೊಡಗು ಜಿಲ್ಲಾ ಸಶಸ್ತ್ರ ಪಡೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಜಿಮಲೆ ಎಸ್ಟೇಟ್‌ಗೆ ಭೇಟಿ ನೀಡಿ ರಾತ್ರಿವರೆಗೂ ಕಾರ್ಯಾಚರಣೆ ನಡೆಸಿದ್ದಾರೆ. ಖುದ್ದಾಗಿ ತಾನು ಕೂಡಾ ಭೇಟಿ ನೀಡಿ ಬೆಳಗಿನ ಜಾವ 2 ಗಂಟೆಯವರೆಗೂ ಕಾರ್ಯಾಚರಣೆ ತಂಡದ ಜೊತೆಗಿದ್ದೆ ಎಂದೂ ರಾಮರಾಜನ್ ಹೇಳಿದ್ದಾರೆ.
ಆದ್ದರಿಂದ ಎಸ್ಟೇಟ್’ಗೆ ನಕ್ಸಲರು ಬಂದಿದ್ದಾರೆ ಎಂಬ ಮಾಹಿತಿ ಸುಳ್ಳು ಎಂದು ತೀರ್ಮಾನಿಸಲಾಗಿದೆಯಾದರೂ, ಕೊಡಗು ಜಿಲ್ಲಾ ಪೊಲೀಸ್ ಜಾಗರೂಕವಾಗಿದೆ ಮತ್ತು ಯಾವುದೇ ಅಹಿತಕರ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧವಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.