ಇದು ಕೇವಲ ಘೋಷಣೆ ಇರುವ ಗ್ಯಾರಂಟಿ: ಬೊಮ್ಮಾಯಿ ಟೀಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಬಗ್ಗೆ ಜನರಿದ್ದ ನಿರೀಕ್ಷೆ ಹುಸಿಯಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಟೀಕಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಮಾತನಾಡಿದ ಅವರು, 5 ಗ್ಯಾರಂಟಿಗಳ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿಲ್ಲ. ಯಾವಾಗಿನಿಂದ ಜಾರಿ ಎಂಬುವ ಕುರಿತು ವಿವರಣೆ ನೀಡಿಲ್ಲ ಎಂದರು.

ಐದು ಗ್ಯಾರಂಟಿಗಳ ಜಾರಿಗೆ 50 ಸಾವಿರ ಕೋಟಿ ಆಗುತ್ತದೆ ಎಂದು ಹೇಳಿದ್ದಾರೆ. ಹಣಕಾಸು ಒದಗಿಸಲು ಯಾವುದೇ ಪೂರ್ವ ಆಲೋಚನೆ ಇಲ್ಲ ಅಂತಾ ಸ್ಪಷ್ಟವಾಗುತ್ತದೆ. ದಾರಿಯಲ್ಲಿ ಹೋಗುವವರಿಗೆ ಕೊಡಲು ಆಗುತ್ತಾ ಅಂತಾ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ದಾರಿಯಲ್ಲಿದ್ದವರು, ಮನೆಯಲ್ಲಿದ್ದವರು ಎಲ್ಲರೂ ಸೇರಿಯೇ ವೋಟ್ ಹಾಕಿದ್ದಾರೆ. ಈಗ ಮತದಾರರಿಗೆ ಎಷ್ಟು ಗೌರವ ಕೊಡುತ್ತಿದ್ದಾರೆ ಅಂತಾ ಗೊತ್ತಾಗುತ್ತದೆ. ಕಾಂಗ್ರೆಸ್ ‌ನಿಧಾನವಾಗಿ ತನ್ನ ಬಣ್ಣ ಬದಲಾಯಿಸುತ್ತಿದೆ ಎಂದು ಆರೋಪಿಸಿದರು.

ಇದೀಗ ವಿದ್ಯುತ್ ಉಚಿತ ನೀಡಲು ಕುಂಟು ನೆಪ ಹೇಳಲಾಗುತ್ತಿದೆ. ಈ ವರ್ಷ ಪಾಸಾದ ಪದವೀಧರರಿಗೆ ಭತ್ಯೆ ಅಂತಾ ಹೇಳಿದ್ದಾರೆ. ನಿಜವಾದ ಕಷ್ಟದಲ್ಲಿರುವ ನಿರುದ್ಯೋಗಿಗಳಿಗೆ ಸಹಾಯ ಮಾಡುವ ಉದ್ದೇಶ ಇವರಿಗಿಲ್ಲ ಎಂದು ಟೀಕೆ ಮಾಡಿದ್ದಾರೆ.

ನಮ್ಮ ಅವಧಿಯಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಅಂತಾ ಹೇಳಿದ್ದಾರೆ. ಇದಕ್ಕೆ ಈಗಾಗಲೇ ಅಸೆಂಬ್ಲಿಯಲ್ಲಿ ಉತ್ತರ ಕೊಟ್ಟಿದ್ದೇನೆ. ಕೋವಿಡ್​ನಿಂದ ಎಲ್ಲಾ ರಾಜ್ಯದಲ್ಲೂ ಸಾಲ ಹೆಚ್ಚಾಗಿದೆ. ಈಗಲೂ ಕೂಡಾ ಅವರು ಪ್ರತಿಪಕ್ಷ ನಾಯಕನಂತೆ ಮಾತಾಡುತ್ತಿದ್ದಾರೆ ಎಂದರು.

ಗ್ಯಾರಂಟಿಗಳ ಜಾರಿಗೆ 50 ಸಾವಿರ ಕೋಟಿ ಬೇಕು ಎನ್ನುತ್ತಿದ್ದಾರೆ. ಇದು ಸಣ್ಣ ಮೊತ್ತವೇ? ಎಂದು ಪ್ರಶ್ನಿಸಿದ ಬೊಮ್ಮಾಯಿ, ಇದು ಕೇವಲ ಘೋಷಣೆ ಇರುವ ಗ್ಯಾರಂಟಿಗಳಾಗಿವೆ. ಮುಂದಿನ ಸಚಿವ ಸಂಪುಟದವರೆಗೆ ನಾವು ಕಾಯೋಣ. ಏನು ಹೇಳಿದ್ದಾರೆ, ಏನು ಮಾಡುತ್ತಾರೆ ಅಂತಾ ನೋಡೋಣ. ಗ್ಯಾರಂಟಿಗಳಿಗೆ ಖಂಡಿತಾ ಷರತ್ತು ವಿಧಿಸುವುದು ಖಂಡಿತ. ಅದರ ಬಗ್ಗೆ ಜನ ತೀರ್ಮಾನ ಮಾಡಲಿ. ನಂತರ ನಾವು ಜನರ ಧ್ವನಿಯಾಗಿ ಕೆಲಸ ಮಾಡುತ್ತೇವೆ ಎಂದರು.

ನಾನು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದ ಆದಾಯ ಹೆಚ್ಚಳ ಮಾಡಿದ್ದೆ. ಚುನಾವಣೆಯಾದ ಮೇಲೆ ಹೀಗೆ ಮಾತನಾಡುವುದು ಸರಿಯಲ್ಲ ಎಂದು ಬೊಮ್ಮಾಯಿ ಕಿಡಿಕಾರಿದರು. ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿ ಸತ್ಯವಾಗುತ್ತೆ ಅಂದುಕೊಂಡಿದ್ದಾರೆ. ಸಿಎಂ ಆರೋಪಕ್ಕೆ ಅಧಿವೇಶನದಲ್ಲಿ ಎಲ್ಲದಕ್ಕೂ ಉತ್ತರ ನೀಡುತ್ತೇನೆ. ಸುಳ್ಳು ಹೇಳಿ ಜನರನ್ನು ಯಾಮಾರಿಸಲು ಆಗುವುದಿಲ್ಲ ಎಂದರು.

ಇಡೀ ದೇಶದಲ್ಲಿ ಜಿಎಸ್​​ಟಿ ಆದಾಯದಲ್ಲಿ ಕರ್ನಾಟಕ 2 ನೇ ಸ್ಥಾನದಲ್ಲಿ ಇದೆ. ಕೇಂದ್ರ ಸರ್ಕಾರ ಸಬ್ ಅರ್ಬನ್, ಮೆಟ್ರೋ, ರೈಲ್ವೇಗೆ ಅನುದಾನ ಕೊಡುತ್ತಾ‌ ಇದೆ. ಅರ್ಧ ಮಾಹಿತಿ ಹೇಳಿ ಅರ್ಧ ಮಾಹಿತಿ ಮುಚ್ಚಿಡುವ ಕೆಲಸ‌ ಸಿಎಂ ಸಿದ್ದರಾಮಯ್ಯ ಅವರು ಮಾಡಿದ್ದಾರೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!