ಪಕ್ಷ ಬಿಡುವುದು ಖಚಿತ, ಮತ್ತೆ ಜೆಡಿಎಸ್‌ ನಿಂದ ಸ್ಪರ್ಧೆ ಮಾಡಲ್ಲ: ಮರಿತಿಬ್ಬೇ ಗೌಡ

ಹೊಸದಿಗಂತ ವರದಿ ಮೈಸೂರು:

ನಾನು ಪಕ್ಷ ಬಿಡುವುದು ಖಚಿತ, ಮುಂದೆ ಜೆಡಿಎಸ್ ನಿಂದ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡಲ್ಲ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಹೇಳಿದರು.
ಮಂಗಳವಾರ ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಜೆಡಿಎಸ್ ಕಾರ್ಯಕರ್ತರಾಗಿ ದುಡಿದ ಕಿಲಾರೆ ಜಯರಾಂಗೆ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಕೊಡಲಿಲ್ಲ. ಜಯರಾಂ ಬಳಿ ಹಣ ಇಲ್ಲ ಎಂದು ಟಿಕೆಟ್ ನಿರಾಕರಿಸಲಾಗಿತ್ತು. ಜೆಡಿಎಸ್ ಕಾರ್ಯಕರ್ತನಲ್ಲದ ಹಣ ಇರುವ ವ್ಯಕ್ತಿಗೆ ಟಿಕೆಟ್ ಕೊಡಲಾಗಿದೆ.
ನಾನು ದುಡ್ಡು ತೆಗೆದು ಕೊಂಡು ಟಿಕೆಟ್ ಕೊಟ್ಟಿದ್ದಾರೆ, ದುಡ್ಡಿಗಾಗಿ ಟಿಕೆಟ್ ಮಾರಿ ಕೊಂಡಿದ್ದಾರೆ ಎಂದು ಹೇಳಿಲ್ಲ. ಆದರೆ ಹಣ ಇರುವವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಹೇಳಿದ್ದೇನೆ. ಈ ನನ್ನ ಮಾತನ್ನು ಎಚ್.ಡಿ ಕುಮಾರಸ್ವಾಮಿ ತಿರುಚಿದ್ದಾರೆ. ಈ ಹಿಂದೆ ಪ್ರಜ್ವಲ್ ರೇವಣ್ಣ, ಜೆಡಿಎಸ್ ನಲ್ಲಿ ಸೂಟಕೇಸ್ ಇದ್ದವರಿಗೆ ಮೊದಲ ಸ್ಥಾನ ಎಂದು ಹೇಳಿದ್ದರು. ಆವತ್ತು ಎಚ್.ಡಿ.ಕುಮಾರಸ್ವಾಮಿ ಏನೂ ಮಾತಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ನನಗೆ ಎರಡು ಚುನಾವಣೆಯಲ್ಲಿ ಜೆಡಿಎಸ್ ನಿಂದ ಬಿ ಫಾರಂ ಕೊಟ್ಟರು. ಆದರೆ, ಹೆಚ್.ಡಿ.ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಆ ಚುನಾವಣೆಗಳಲ್ಲಿ ನನ್ನ ಪರವಾಗಿ ಒಂದು ದಿನವೂ ಪ್ರಚಾರಕ್ಕೆ ಬರಲಿಲ್ಲ. ಟಿಕೆಟ್ ಕೊಟ್ಟು ನನ್ನ ಸೋಲಿಸುವ ಪ್ರಯತ್ನವನೂ ಜೆಡಿಎಸ್ ವರಿಷ್ಠರು ಮಾಡಿದರು. ಆದರೂ ನಾನು ಗೆದ್ದೆ. ಪದವೀಧರ ಕ್ಷೇತ್ರಕ್ಕೆ ಜೆಡಿಎಸ್ ನಿಂದ ರಾಮುಗೆ ಯಾವ ಮಾನದಂಡದಲ್ಲಿ ಟಿಕೆಟ್ ಕೊಟ್ಟಿರಿ, ಜೆಡಿಎಸ್ ನಲ್ಲಿ ದುಡ್ಡೆ ಮಾನದಂಡನಾ., ಪಕ್ಷಕ್ಕಾಗಿ ದುಡಿಮೆ ಮಾಡಿದ್ದು ಮಾನದಂಡ ಅಲ್ವಾ.? ಜಯರಾಂ 30 ವರ್ಷದಿಂದ ಜೆಡಿಎಸ್ ಗೆ ದುಡಿದಿದ್ದಾರೆ. ಉದ್ಯಮಿಗಳನ್ನು ಜೆಡಿಎಸ್ ನಿಂದ ವಿಧಾನಪರಿಷತ್ ಕಳಿಸಲಾಗಿದೆ. ಇದುವರೆಗೂ ರೈತನನ್ನು, ಪಕ್ಷದ ನಿಷ್ಠಾವಂತ ಕಾರ್ಯಕರ್ತನನ್ನು ವಿಧಾನ ಪರಿಷತ್ ಗೆ ಜೆಡಿಎಸ್ ನಿಂದ ಕಳಿಸಲಿಲ್ಲಾ ಯಾಕೆ.? ಎಂದು ಖಾರವಾಗಿ ಪ್ರಶ್ನಿಸಿದರು.
ಯಾವ ಚುನಾವಣೆಯಲ್ಲಿ ನನಗೆ ಎಚ್.ಡಿಕೆ ಎಷ್ಟು ಹಣ ಕೊಟ್ಟಿದ್ದಾರೆ.ಅದನ್ನು ಬಹಿರಂಗವಾಗಿ ಹೇಳಲಿ. ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. ನನಗೆ ಮೂರು ವರ್ಷ ವಿಧಾನ ಪರಿಷತ್ ನ ಉಪಸಭಾಪತಿಯಾಗಿ ಜೆಡಿಎಸ್ ಮಾಡಿದೆ. ನನಗೆ ವಾಸ ಮಾಡಲು ಮೈಸೂರಿನಲ್ಲಿ ಸ್ವಂತ ಮನೆ ಇಲ್ಲ. ಇಲ್ಲಿ ಮನೆ ಕಟ್ಟೋಕೆ ಶುರು ಮಾಡಿ ಮೂರು ವರ್ಷವಾಯ್ತು. ಇನ್ನೂ ನನ್ನ ಕೈಯಲ್ಲಿ ಮನೆ ಮುಗಿಸಲು ಆಗಿಲ್ಲ. ನನ್ನ ಬದುಕು ತೆರೆದ ಪುಸ್ತಕ. ನನ್ನ ಬಗ್ಗೆ ಅನುಮಾನ ಬರುವ ರೀತಿ ಯಾಕೆ ಮಾತಾಡುತ್ತಿರಿ. ಎಂದು ಕಿಡಿಕಾರಿದರು.
ಜೆಡಿಎಸ್ ಬಿಟ್ಟವರು ಗುಡಿಸಲಲ್ಲಿ ಇದ್ದಾರಾ.? ನೀವು ಮಾತ್ರ ವೆಸ್ಡ್ ಎಂಡ್ ಹೋಟೆಲ್ ನಲ್ಲಿ ಇದ್ದಿರಾ ಅಲ್ವಾ.?
ಕಾಂಗ್ರೆಸ್ ನಲ್ಲಿನ ಬಿ.ಎಲ್. ಶಂಕರ್ ಬಗ್ಗೆ ಬಹಳ ಕೀಳಾಗಿ ಮಾತಾಡಿದ್ದಾರೆ. ಅವರ ಬಗ್ಗೆ ಮಾತಾಡುವ ಯೋಗ್ಯತೆ ಹೆಚ್.ಡಿ.ಕುಮಾರಸ್ವಾಮಿಗೆ ಇಲ್ಲ. ಜೆಡಿಎಸ್ ಬಿಟ್ಟವರು ಗುಡಿಸಲಲ್ಲಿ ಇದ್ದಾರಾ.? ನೀವು ಮಾತ್ರ ವೆಸ್ಡ್ ಎಂಡ್ ಹೋಟೆಲ್ ನಲ್ಲಿ ಇದ್ದಿರಾ ಅಲ್ವಾ.? ಪಕ್ಷ ಕಟ್ಟಿದವರ ಬಗ್ಗೆ ಕೀಳಾಗಿ ಮಾತಾಡಬೇಡಿ. ನಾಯಕರು ಯಾಕೆ ಜೆಡಿಎಸ್ ಬಿಡುತ್ತಿದ್ದಾರೆ ಅಂತಾ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಅಧಿಕಾರಕ್ಕೆ ಬಂದಾಗ ಯಾವತ್ತೂ ಕಾರ್ಯಕರ್ತರ ಬಗ್ಗೆ ಗಮನಹರಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಪಕ್ಷದಲ್ಲಿದ್ದೂ ಎಂದೂ ದ್ರೋಹ ಮಾಡಿಲ್ಲ. ಪಕ್ಷದ ವರಿಷ್ಠರು ನನ್ನ ಬಗ್ಗೆ ಈ ರೀತಿ ಹೇಳಿರುವುದು ನೋವು ತಂದಿದೆ ಎಂದು ಗದ್ಗದಿತರಾದರು.
ಕುಮಾರಸ್ವಾಮಿ ಎರಡನೇ ಬಾರಿ ಸಿಎಂ ಆದ ನಂತರ ಅನೇಕ ನಾಯಕರು ಪಕ್ಷ ತೊರೆದಿದ್ದಾರೆ. ಈ ಬಗ್ಗೆ ಒಂದು ಸಭೆ ನಡೆಸಿಲ್ಲ. ಹೋದವರೆಲ್ಲಾ ಹೋಗಲಿ ಪುಟ್ ಪಾತ್ ಅಂತಾರೆ. ಸಿದ್ದರಾಮಯ್ಯ, ದೇಶಪಾಂಡೆ, ಸೇರಿ ಅನೇಕರು ಪಕ್ಷ ಬಿಟ್ಟರು. ಅವರೆಲ್ಲಾ ಪುಟ್ ಪಾತ್ ಆಗಿದ್ದಾರಾ ? ನಂಜನಗೂಡು ದೇವಸ್ಥಾನದ ಮುಂದೆ ಭಿಕ್ಷಾ ಪಾತ್ರೆ ಹಿಡಿದಿದ್ದಾರಾ ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ವಾಭಿಮಾನ ಬಿಟ್ಟು ಗುಲಾಮನಾಗಿ ಕೆಲಸ ಮಾಡಲು ನಾನು ಸಿದ್ದನಿಲ್ಲ. ನಾನು ಬೇರೆ ಪಕ್ಷಕ್ಕೆ ಹೋಗಲು ಸಿದ್ದನಿಲ್ಲ. ಯಾವುದೇ ಪಕ್ಷದ ನಾಯಕರ ಸಂಪರ್ಕದಲ್ಲಿ ನಾನು ಇಲ್ಲ. ನಾನು ಈ ಪದವೀಧರರ ಚುನಾವಣೆಯಲ್ಲಿ ತಟಸ್ಥವಾಗಿರುತ್ತೇನೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!