ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವಾಲಯದ ಪಾವಿತ್ರ್ಯತೆಯನ್ನು ಉಳಿಸುವ ನಿಟ್ಟಿನಲ್ಲಿ ಒಡಿಶಾದ ಪುರಿ ಜಗನ್ನಾಥ ದೇವಾಲಯಕ್ಕೆ ಹೊಸ ವಸ್ತ್ರ ಸಂಹಿತೆ ಜಾರಿಗೆ ಬರಬಹುದಾದ ಸಾಧ್ಯತೆ ಕಾಣಿಸುತ್ತಿದೆ. ಈ ಕುರಿತು ರಾಜ್ಯ ಕಾನೂನು ಆಯೋಗ ಸರ್ಕಾರಕ್ಕೆ ಮಹತ್ವದ ಶಿಫಾರಸು ಸಲ್ಲಿಸಿದೆ.
ನ್ಯಾಯಮೂರ್ತಿ ಬಿಶ್ವನಾಥ್ ರಾತ್ ನೇತೃತ್ವದ ಆಯೋಗದ ವರದಿಯಲ್ಲಿ, ದೇವಾಲಯ ಪ್ರವೇಶಕ್ಕೆ ಸಾಂಪ್ರದಾಯಿಕ ಉಡುಪುಗಳನ್ನು ಕಡ್ಡಾಯಗೊಳಿಸುವಂತೆ ಸೂಚಿಸಲಾಗಿದೆ. ಮಹಿಳೆಯರು ಜೀನ್ಸ್, ಟೀ-ಶರ್ಟ್ ಸೇರಿದಂತೆ ಆಧುನಿಕ ಉಡುಪುಗಳನ್ನು ಧರಿಸಿ ಒಳಗೆ ಪ್ರವೇಶಿಸಬಾರದು ಎಂಬ ಸಲಹೆಯೂ ನೀಡಲಾಗಿದೆ.
ಪುರುಷರಿಗೆ ಧೋತಿ, ಪಂಚೆ ಅಥವಾ ಕುರ್ತಾ-ಪೈಜಾಮ, ಮಹಿಳೆಯರಿಗೆ ಸೀರೆ ಅಥವಾ ಸಲ್ವಾರ್-ಕಮೀಜ್ ಧರಿಸಲು ಶಿಫಾರಸು ಮಾಡಲಾಗಿದೆ. ಮಕ್ಕಳಿಗೆ ಸರಳ ಅಥವಾ ಸಾಂಪ್ರದಾಯಿಕ ಉಡುಪುಗಳಿಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ:
ಈ ಹಿಂದೆ ದೇವಾಲಯ ಆಡಳಿತವು ಅಶಿಷ್ಟ ಉಡುಪುಗಳ ಬಗ್ಗೆ ಮನವಿ ಮಾಡಿದ್ದರೂ, ಕಾನೂನು ಸ್ಪಷ್ಟತೆ ಇಲ್ಲದ ಕಾರಣ ಕಟ್ಟುನಿಟ್ಟಾಗಿ ಜಾರಿಗೆ ಬರಲಿಲ್ಲ.
ಸರ್ಕಾರ ಈ ವರದಿಯನ್ನು ಪರಿಶೀಲಿಸುತ್ತಿದ್ದು, ಅನುಮೋದನೆ ದೊರೆತರೆ ದೇವಾಲಯ ಕಾಯ್ದೆಗೆ ತಿದ್ದುಪಡಿ ತರಲಾಗುವ ಸಾಧ್ಯತೆ ಇದೆ. ದೇಶದ ಹಲವಾರು ಪ್ರಮುಖ ದೇವಾಲಯಗಳಲ್ಲಿ ಈಗಾಗಲೇ ಇಂತಹ ವಸ್ತ್ರ ನಿಯಮಗಳು ಜಾರಿಯಲ್ಲಿರುವುದು ಗಮನಾರ್ಹವಾಗಿದೆ.



