August 15, 2026
Saturday, August 15, 2026
spot_img

ಸಚಿನ್ ತೆಂಡೂಲ್ಕರ್ ಹಾದಿಯಲ್ಲಿ ಯಶಸ್ವಿ ಜೈಸ್ವಾಲ್: ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಉದಯೋನ್ಮುಖ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ. ಶ್ರೀಲಂಕಾ ವಿರುದ್ಧ ಗಾಲ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅವರು ತಮ್ಮ ವೃತ್ತಿಜೀವನದ 30ನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. ಆದರೆ, ಈ ಮೈಲಿಗಲ್ಲು ಒಂದು ವಿಶಿಷ್ಟ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಜೈಸ್ವಾಲ್ ತಮ್ಮ ಮೊದಲ 30 ಟೆಸ್ಟ್ ಪಂದ್ಯಗಳನ್ನು 30 ಬೇರೆ ಬೇರೆ ಕ್ರೀಡಾಂಗಣಗಳಲ್ಲಿ ಆಡಿದ್ದಾರೆ. ಅಂದರೆ, ಅವರು ಈವರೆಗೆ ಯಾವುದೇ ಒಂದು ಟೆಸ್ಟ್ ಮೈದಾನದಲ್ಲಿ ಎರಡನೇ ಬಾರಿ ಆಡಿಲ್ಲ.

ಸಚಿನ್ ತೆಂಡೂಲ್ಕರ್ ಹಾದಿಯಲ್ಲಿ ಜೈಸ್ವಾಲ್:

ಈ ಅಪರೂಪದ ಸಾಧನೆಯ ಮೂಲಕ ಜೈಸ್ವಾಲ್ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಸಾಲಿಗೆ ಸೇರಿದ್ದಾರೆ. ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿಜೀವನದ ಮೊದಲ 32 ಟೆಸ್ಟ್ ಪಂದ್ಯಗಳನ್ನು 32 ವಿಭಿನ್ನ ಮೈದಾನಗಳಲ್ಲಿ ಆಡಿದ್ದರು. ಹಾಗೆಯೇ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಮೊದಲ 33 ಟೆಸ್ಟ್‌ಗಳನ್ನು 33 ಬೇರೆ ಬೇರೆ ಕ್ರೀಡಾಂಗಣಗಳಲ್ಲಿ ಆಡಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಜೈಸ್ವಾಲ್ ಅವರ ಈ ಪ್ರಯಾಣವು ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್‌ನ ರೊಸೊದಲ್ಲಿ ಆರಂಭವಾಗಿ, ವೆಸ್ಟ್ ಇಂದೀಸ್, ದಕ್ಷಿಣ ಆಫ್ರಿಕಾ, ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಸರಣಿಗಳನ್ನು ದಾಟಿ ಈಗ ಶ್ರೀಲಂಕಾದ ಗಾಲ್ ತಲುಪಿದೆ.

ಜೈಸ್ವಾಲ್ ಅದ್ಭುತ ಟೆಸ್ಟ್ ದಾಖಲೆ:

ಯಶಸ್ವಿ ಜೈಸ್ವಾಲ್ ತಮ್ಮ ಆರಂಭಿಕ ಟೆಸ್ಟ್ ವೃತ್ತಿಜೀವನದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಆಡಿರುವ 30 ಪಂದ್ಯಗಳ 55 ಇನ್ನಿಂಗ್ಸ್‌ಗಳಲ್ಲಿ ಅವರು ಒಟ್ಟು 2,567 ರನ್ ಗಳಿಸಿದ್ದಾರೆ. ಇದರಲ್ಲಿ 7 ಶತಕ ಹಾಗೂ 13 ಅರ್ಧಶತಕಗಳು ಸೇರಿವೆ. ಅವರ ಗರಿಷ್ಠ ಸ್ಕೋರ್ ಅಜೇಯ 214 ರನ್ ಆಗಿದೆ.

ಇದನ್ನೂ ಓದಿ:

ರನ್ ಔಟ್ ನಿರಾಸೆ:

ಆದರೆ, ಈ ಚಾರಿತ್ರಿಕ 30ನೇ ಟೆಸ್ಟ್ ಪಂದ್ಯವು ಜೈಸ್ವಾಲ್‌ಗೆ ನಿರಾಸೆ ತಂದಿದೆ. ಗಾಲ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮವಾಗಿ ಆಡುತ್ತಿದ್ದ ಅವರು 32 ರನ್ ಗಳಿಸಿದ್ದಾಗ ದುರದೃಷ್ಟಕರವಾಗಿ ರನ್ ಔಟ್ ಆದರು. ಕೆ.ಎಲ್. ರಾಹುಲ್ ಅವರೊಂದಿಗೆ ಉಂಟಾದ ಗೊಂದಲ ಹಾಗೂ ಬೌಲರ್ ಜೊತೆಗಿನ ಡಿಕ್ಕಿಯಿಂದಾಗಿ ಬ್ಯಾಲೆನ್ಸ್ ಕಳೆದುಕೊಂಡ ಜೈಸ್ವಾಲ್ ಕ್ರೀಸ್ ತಲುಪಲಾಗದೆ ವಿಕೆಟ್ ಒಪ್ಪಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಜೈಸ್ವಾಲ್ ರನ್ ಔಟ್ ಆಗಿರುವುದು ಇದು ಮೂರನೇ ಬಾರಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !