ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸೀರತ್ ನಾಜಿ ಎನ್ನುವ ಜಮ್ಮುವಿನ ಪೋರಿಯೊಬ್ಬಳು ವಿಡಿಯೋ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಬೇಡಿಕೆಯೊಂದನ್ನು ಇಟ್ಟಿದ್ದಾಳೆ.
ಇಲ್ಲಿ ನೋಡಿ ಪ್ರಧಾನಿ ಮೋದಿಯವರೇ, ನಾನು ನನ್ನ ಸ್ನೇಹಿತರೆಲ್ಲರೂ ಶಾಲೆಯಲ್ಲಿ ನೆಲದ ಮೇಲೆಯೇ ಕುಳಿತು ಪಾಠ ಕೇಳುತ್ತೇವೆ, ಇಡೀ ಶಾಲೆ ಸಂಪೂರ್ಣವಾಗಿ ಧೂಳಿನಿಂದ ಕೂಡಿದೆ ಎಂದು ವಾಸ್ತವವನ್ನು ವಿವರಿಸಿದ್ದಾಳೆ.
ಸೀರತ್ ಜಮ್ಮು ಕಾಶ್ಮೀರದ ಕಥುವಾದ ಲೋಹಾಯ್ ಮಲ್ಹಾರ್ ಗ್ರಾಮದವಳಾಗಿದ್ದಾಳೆ. (ಪ್ಲೀಸ್ ಮೋದಿ ಜೀ, ಏಕ ಅಚ್ಛೀಸಿ ಸ್ಕೂಲ್ ಬನ್ವಾದೋನಾ) ಒಂದು ಶಾಲೆಯನ್ನು ನಿರ್ಮಿಸಿಕೊಡಿ ಪ್ಲೀಸ್ ಮೋದಿಯವರೇ ಎಂದು ಮನವಿ ಇಟ್ಟಿದ್ದಾಳೆ.
ಮಾರ್ಮಿಕ್ ನ್ಯೂಸ್ ಎನ್ನುವ ಫೇಸ್ಬುಕ್ ಪೇಜ್ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದೀಗ ಆ ವಿಡಿಯೋಗೆ 2 ಮಿಲಿಯನ್ ವೀಕ್ಷಣೆಗಳು ಹಾಗೂ 1,16,000 ಲೈಕ್ಸ್ಗಳು ಬಂದಿವೆ.
ಕೇವಲ 5 ನಿಮಿಷದ ವಿಡಿಯೋ ಇದಾಗಿದ್ದು, ಆಕೆ ತನ್ನನ್ನು ಸ್ಥಳೀಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಎಂದು ಹೇಳಿಕೊಂಡಿದ್ದಾಳೆ.
ವಿಡಿಯೋದಲ್ಲಿ ಶಾಲೆಯ ಕಾಂಪೌಂಡ್, ಶಾಲಾ ಕಟ್ಟಡವನ್ನು ತೋರಿಸಿದ್ದಾಳೆ. ಬಳಿಕ ಮೋದಿಯವರೇ ನಿಮ್ಮ ಬಳಿ ನಾನೇನೋ ಹೇಳಬೇಕಿದೆ ಎಂದಿದ್ದಾಳೆ. ಬಾಗಿಲು ಮುಚ್ಚಿರುವ ಎರಡು ರೂಂಗಳನ್ನು ತೋರಿಸಿ ಅದು ಪ್ರಿನ್ಸಿಪಲ್ ಕಚೇರಿ ಹಾಗೂ ಸ್ಟಾಫ್ರೂಂ ಎಂದು ತೋರಿಸಿದ್ದಾಳೆ.
ನೋಡಿ ಶಾಲೆಯ ನೆಲವು ಎಷ್ಟು ಗಲೀಜಾಗಿದೆ ನಾವು ಇಲ್ಲಿಯೇ ಕುಳಿತು ಪಾಠ ಕೇಳಬೇಕು, ನಮ್ಮ ಸಮವಸ್ತ್ರಗಳು ಕೂಡ ಹಾಳಾಗುತ್ತಿವೆ, ನಮ್ಮಲ್ಲಿ ಬೆಂಚ್ಗಳು ಕೂಡ ಇಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾಳೆ.
ಮೋದಿಯವರೆ ನೀವು ಇಡೀ ದೇಶದ ಜನರ ಕಷ್ಟಗಳನ್ನು ಆಲಿಸುತ್ತೀರಿ ಅದೇ ರೀತಿ ನನ್ನ ಮನವಿಯನ್ನು ಕೂಡ ಸ್ವೀಕರಿಸಿ, ನಮಗಾಗಿ ಒಂದು ಶಾಲೆ ಕಟ್ಟಿಸಿಕೊಡಿ ಎಂದು ಪರಿ ಪರಿಯಾಗಿ ಕೇಳಿಕೊಂಡಿದ್ದಾಳೆ.
https://www.facebook.com/watch/?v=906273687247632