Sunday, December 4, 2022

Latest Posts

ಕಾರ್ಪೋರೇಟ್ ವಲಯದಲ್ಲೀಗ ಉದ್ಯೋಗ ಕಡಿತದ ಪರ್ವವೇ?- ಇಲ್ಲಿದೆ ಟ್ರೆಂಡ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

2023ರಲ್ಲಿ ಜಗತ್ತು ಒಂದುಮಟ್ಟದ ಆರ್ಥಿಕ ಹಿಂಜರಿತವನ್ನು, ರಿಸೆಷನ್ ಅನ್ನು ಅನುಭವಿಸುತ್ತೆ ಅಂತ ಹಲವು ವಿತ್ತ ಪರಿಣತರು ಅದಾಗಲೇ ಭವಿಷ್ಯ ನುಡಿದಿದ್ದಾರೆ. ಭಾರತದ ಮೇಲೆ ಹೇಳಿಕೊಳ್ಳುವಂಥ ಪರಿಣಾಮಗಳೇನೂ ಆಗಲ್ಲ ಎಂಬ ವಾದಗಳ ನಡುವೆಯೇ ಇವತ್ತಿಗೆ ಕಾರ್ಪೋರೇಟ್ ವಲಯವಂತೂ ಹಲವು ಉದ್ಯೋಗಗಳನ್ನು ಕಡಿತ ಮಾಡುತ್ತ ಸಾಗಿದೆ.

ಎಲಾನ್ ಮಸ್ಕ್ ಟ್ವಿಟರ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಲೇ ಅರ್ಧದಷ್ಟು ಕಾರ್ಯಪಡೆಯನ್ನು ಮೊಟಕುಗಳಿಸಿ, ದೊಡ್ಡಮಟ್ಟದಲ್ಲಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಿರೋ ವಿದ್ಯಮಾನ ಗೊತ್ತೇ ಇದೆ. ಇದು ಮಸ್ಕ್ ಮಾತ್ರ ಅನುಸರಿಸುತ್ತಿರುವ ನೀತಿ ಎಂದುಕೊಳ್ಳಬೇಡಿ. ಲಾಭದಲ್ಲೇ ಇರುವ ಇನ್ನೊಂದು ಜಗತ್ಪಸಿದ್ದ ಸಾಮಾಜಿಕ ತಾಣ ಫೇಸ್ಬುಕ್ ನ ಮಾತೃಸಂಸ್ಥೆ ಮೆಟಾ ಸಹ ಈ ವಾರ ಸಾವಿರಾರು ಉದ್ಯೋಗಿಗಳನ್ನು ತೆಗೆಯುವ ಸಿದ್ಧತೆಯಲ್ಲಿದೆ ಅಂತ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇಲ್ಲೆಲ್ಲ ಭಾರತೀಯ ಮೂಲದ ಉದ್ಯೋಗಿಗಳೂ ಹೆಚ್ಚು ಉದ್ಯೋಗ ನಷ್ಟಕ್ಕೆ ಒಳಗಾಗಲಿದ್ದಾರೆ ಅನ್ನೋದು ಗೊತ್ತಿರುವಂಥದ್ದೇ.

ಆದರೆ, ನೇರವಾಗಿ ಭಾರತವನ್ನೇ ಗಮನಿಸುವುದಾದರೆ ತಮ್ಮ ಬಹುದೊಡ್ಡ ಫಂಡಿಂಗ್ ಕಾರಣಕ್ಕೆ ಸುದ್ದಿಯಾಗುತ್ತಿದ್ದ ನವೋದ್ದಿಮೆಗಳ ವಲಯದಲ್ಲೀಗ ಭಾರಿ ಉದ್ಯೋಗ ಕಡಿತ ವರದಿಯಾಗುತ್ತಿದೆ.
2022ರಲ್ಲಿ ನಾನಾ ಸ್ಟಾರ್ಟಪ್ ಗಳಿಂದ ವಜಾಗೊಂಡ ಉದ್ಯೋಗಿಗಳ ಸಂಖ್ಯೆ 15,708. ಇದು ನವೋದ್ದಿಮೆಗಳನ್ನು ಕವರ್ ಮಾಡುವ ಇಂಕ್42 ಎಂಬ ಜಾಲತಾಣ ನವೆಂಬರ್ ಪ್ರಾರಂಭದಲ್ಲಿ ಕೊಟ್ಟಿರೋ ಅಂಕಿಅಂಶ. ಭಾರತದಮಟ್ಟಿಗೆ ಇದರಲ್ಲಿ ಮುಂಚೂಣಿಯಲ್ಲಿರೋದು ಒಂದು ಹಂತದಲ್ಲಿ ಅತ್ಯಾಕರ್ಷಕ ಎನಿಸಿದ್ದ ಎಡ್ ಟೆಕ್ ಕಂಪನಿಗಳು. 14 ಎಡ್ ಟೆಕ್ ಕಂಪನಿಗಳು ಸೇರಿ 2022ರಲ್ಲಿ ವಜಾಗೊಳಿಸಿರೋ ಉದ್ಯೋಗಿಗಳ ಸಂಖ್ಯೆ 6,898.

ಮತ್ತೆ ಜಾಗತಿಕ ಟ್ರೆಂಡ್ ಗಮನಿಸುವುದಾದರೆ, ನಷ್ಟದಲ್ಲಿಲ್ಲದೇ ಇರೋ ದಿಗ್ಗಜ ಕಂಪನಿಗಳೇ ಇತ್ತೀಚಿನ ದಿನಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾ ಮಾಡಿವೆ. ಉದಾಹರಣೆಗೆ ಇಂಟೆಲ್ ಮತ್ತು ಮೈಕ್ರೋಸಾಫ್ಟ್ ಗಳು ಇತ್ತೀಚೆಗೆ ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿರೋ ವರದಿ ಇದೆ. ಇನ್ನು ಆ್ಯಪಲ್, ಅಮೆಜಾನ್ ಥರದವು ವಜಾ ಪ್ರಕ್ರಿಯೆಗೆ ಕೈ ಹಾಕದೇ ಇದ್ರೂ ಅದಾಗಲೇ ತಮ್ಮ ಹೊಸ ಉದ್ಯೋಗ ನೀಡಿಕೆಗಳನ್ನು ನಿಲ್ಲಿಸಿವೆ.

ಹೀಗೆ, ಅದಾಗಲೇ ಒಂದು ನಿರ್ದಿಷ್ಟ ಆದಾಯದ ಮಾಡೆಲ್ ಇರುವ ಕಂಪನಿಗಳೇ ಉದ್ಯೋಗ ಕಡಿತದ ಮಾರ್ಗ ತುಳಿತಿರುವಾಗ ನಮ್ಮಲ್ಲಿ ಬೈಜೂಸ್ ಥರದ ಕಂಪನಿ 2,500 ಉದ್ಯೋಗಿಗಳನ್ನು ಮನೆಗೆ ಕಳಿಸಿರೋದು ತೀರ ಆಶ್ಚರ್ಯ ಏನಲ್ಲ. ಯಾಕಂದ್ರೆ ಕೋಟ್ಯಂತರ ರುಪಾಯಿಗಳನ್ನು ಜಾಹೀರಾತಿಗೆ ಸುರಿದು, ಐಪಿಎಲ್ ಥರದ ದುಬಾರಿ ಕಾರ್ಯಕ್ರಮಗಳಿಗೆ ದುಡ್ಡು ಚೆಲ್ಲಿಕೊಂಡಿರೋ ಬೈಜೂಸ್ ವರ್ಷಕ್ಕೆ ಸುಮಾರು 4,000 ಕೋಟಿ ರುಪಾಯಿಗಳಷ್ಟು ನಷ್ಟ ಮಾಡಿಕೊಂಡಿದೆ. ಹೀಗಿರುವಾಗ, ಅದೇನೇ ಪ್ರಚಾರ, ಯುನಿಕಾರ್ನ್ ಎಂಬ ಆಕರ್ಷಕ ಪಟ್ಟದ ಹೊಗಳಿಕೆ ಏನೇ ಇದ್ರೂ ದೀರ್ಘಾವಧಿಯಲ್ಲಿ ಇವರೆಲ್ಲ ತಮ್ಮ ಮೂಲ ಉದ್ದೇಶ- ಬೈಜೂಸ್ ವಿಚಾರಕ್ಕೆ ಬರೋದಾದ್ರೆ ಶಿಕ್ಷಣ ಪ್ರಸಾರ- ಎಷ್ಟರಮಟ್ಟಿಗೆ ಈಡೇರಿಸುತ್ತವೆ ಅನ್ನೋದು ಯಾವತ್ತೂ ಪ್ರಶ್ನಾರ್ಹವೇ.

ಬೈಜೂಸ್ ಕೇವಲ ಉದಾಹರಣೆ ಮಾತ್ರ. ಇವತ್ತು ಭಾರತದಲ್ಲಿ ನಾವು ಯೂನಿಕಾರ್ನ್ ಅಂತ ಸಂಭ್ರಮಪಟ್ಟುಕೊಂಡಿರೋ ಅನೇಕ ನವೋದ್ದಿಮೆಗಳು ಮೌಲ್ಯದ ಲೆಕ್ಕದಲ್ಲಷ್ಟೇ ಸಾವಿರಾರು ಕೋಟಿ ಬೆಲೆ ಬಾಳುತ್ತವೆ. ಆದರೆ ಲಾಭದ ಮುಖ ನೋಡುವ ದಿನಗಳು ಮಾತ್ರ ಕೇವಲ ಆಶಾವಾದದ ಲೆಕ್ಕಾಚಾರಗಳಿಗೆ ಮಾತ್ರ ಜೋತುಬಿದ್ದುಕೊಂಡಿರುವಂಥದ್ದು. ಅಮೆರಿಕದಿಂದ ದುಡ್ಡು ಪ್ರಿಂಟಾಗಿ ಇಲ್ಲಿ ಬಂದು ಬೀಳುವಷ್ಟರವರೆಗೆ ಎಲ್ಲವೂ ಚೆಂದ. ಈ ಕಂಪನಿ ಅಷ್ಟು ಫಂಡಿಂಗ್ ಪಡೀತು, ಇನ್ನೊಂದು ಇಷ್ಟು ಕೋಟಿ ರುಪಾಯಿ ದುಡ್ಡು ಎತ್ತಿತು ಅಂತೆಲ್ಲ ತಾತ್ಕಾಲಿಕ ಹವಾ ಎಬ್ಬಿಸಬಹುದು. ಆದರೆ, ಜಾಗತಿಕ ರಿಸೆಷನ್ ಒಂದು ಶುರುವಾಗಿದ್ದೇ ಆದರೆ, ಭಾರತದಲ್ಲಿ ನವೋದ್ದಿಮೆ ಸೇರಿದಂತೆ ಕಾರ್ಪೋರೇಟ್ ವಲಯದಲ್ಲಿ ಉದ್ಯೋಗ ಕಡಿತದ ತೀವ್ರ ಬಿಸಿ ಅರಿವಿಗೆ ಬರಲಿರುವುದು ಬಹುತೇಕ ಖಚಿತ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!