ಡಿಸೆಂಬರ್’ನಲ್ಲಿ ಉದ್ಯೋಗ ಮೇಳ: ಯಶಸ್ಸಿಗೆ ಶ್ರಮಿಸಲು ಜಿಲ್ಲಾಧಿಕಾರಿ ಸೂಚನೆ

ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲಾಡಳಿತ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಡಿಸೆಂಬರ್ ಎರಡು ಮತ್ತು ಮೂರನೇ ವಾರದಲ್ಲಿ ಉದ್ಯೋಗ ಮೇಳ ಆಯೋಜಿಸುವ ಬಗ್ಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೌಶಲ್ಯ ಅಭಿವೃದ್ಧಿ ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಉದ್ಯೋಗ ಮೇಳ ಆಯೋಜಿಸುವ ಸಂಬಂಧ ಪೂರ್ವಭಾವಿ ಸಭೆ ನಡೆಯಿತು.
ಡಿ. 13 ರಂದು ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, 16 ರಂದು ಮಡಿಕೇರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ 20 ರಂದು ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಉದ್ಯೋಗ ಮೇಳ ಆಯೋಜಿಸಲು ನಿರ್ಧರಿಸಲಾಯಿತು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಸರ್ಕಾರದ ನಿರ್ದೇಶನದಂತೆ ಉದ್ಯೋಗ ಮೇಳ ಆಯೋಜಿಸಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಕಾಲೇಜಿನ ಪ್ರಾಂಶುಪಾಲರ ಜೊತೆ ಸಮನ್ವಯ ಸಾಧಿಸಿ ಉದ್ಯೋಗ ಮೇಳ ಯಶಸ್ಸಿಗೆ ಶ್ರಮಿಸಬೇಕೆಂದು ನಿರ್ದೇಶನ ನೀಡಿದರು.
ಅಭಾ ಕಾರ್ಡ್’ಗೆ ನೋಂದಣಿ: ಉದ್ಯೋಗ ಮೇಳ ಸಂದರ್ಭದಲ್ಲಿ ಅಭಾ ಕಾರ್ಡ್ ನೋಂದಣಿಗೆ ಕ್ರಮವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ಮಾತನಾಡಿ, ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳ ನೋಂದಣಿಗೆ ಕ್ರಮವಹಿಸಬೇಕು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಉದ್ಯೋಗದಾತರ ನಿಖರ ಮಾಹಿತಿಯನ್ನು ಒದಗಿಸಬೇಕೆಂದು ತಿಳಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಜೀವನೋಪಾಯ ಇಲಾಖೆಯ ಅಧಿಕಾರಿ ಉಮಾ ಅವರು ಮಾತನಾಡಿ, www.koushalkar.com ವೆಬ್‍ಪೋರ್ಟಲ್‍ನಲ್ಲಿ 8,753 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಪದವಿ, ಸ್ನಾತಕೋತ್ತರ ಪದವಿ, ಪಿಯುಸಿ, ಡಿಪ್ಲೊಮಾ, ಐಟಿಐ, ಎಸ್ಸೆಸ್ಸೆಲ್ಸಿ ಓದಿದವರು ಹೆಸರು ನೋಂದಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು.
771 ಮಂದಿಗೆ ಉದ್ಯೋಗ:
ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆಯಡಿ 1,504 ಮಂದಿ ತರಬೇತಿ ಪಡೆದಿದ್ದಾರೆ. ಇವರಲ್ಲಿ 588 ಮಂದಿ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಅವರ ಕೌಶಲ್ಯ ಕರ್ನಾಟಕ ಯೋಜನೆಯಡಿ 233 ಮಂದಿ ತರಬೇತಿ ಪಡೆದು 83 ಮಂದಿ ಉದ್ಯೋಗ ಪಡೆದಿದ್ದಾರೆ ಎಂದು ಅವರು ವಿವರಿಸಿದರು.
ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳ ನೋಂದಣಿ ಸಂಬಂಧ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ವತಿಯಿಂದ ಆಯೋಜಿಸಲಾದ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಹಾಗೂ ಮುಖ್ಯಮಂತ್ರಿ ಅವರ ಕೌಶಲ್ಯ ಕರ್ನಾಟಕ ಯೋಜನೆಯಡಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ www.koushalkar.com ವೆಬ್ ಪೋರ್ಟಲ್‍ನಲ್ಲಿ ನೋಂದಣಿಯಾಗಿರುವ ಅಭ್ಯರ್ಥಿಗಳಿಗೆ ಹಾಗೂ www.ncs.gov.in ನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ನೋಂದಾಯಿಸಿರುವ ಉದ್ಯೋಗ ಆಕಾಂಕ್ಷಿಗಳಿಗೆ ಬಲ್ಕ್ ಎಸ್‍ಎಂಎಸ್ ಮುಖಾಂತರ ಉದ್ಯೋಗ ಮೇಳದಲ್ಲಿ ಭಾಗವಹಿಸಲು ತಿಳಿಸಲಾಗುವುದು ಎಂದರು.
ಹಾಗೆಯೇ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ನೋಂದಣಿಗಾಗಿ ಗೂಗಲ್ ವೆಬ್‍ಲಿಂಕ್ http://forms/gle/ErcWUnGyps4SvJRr7/ ನಲ್ಲಿ ನೋಂದಾಯಿಸಬಹುದಾಗಿದೆ ಎಂದರು.
ಉದ್ಯೋಗ ಮೇಳದಲ್ಲಿ ಎಲ್ ಅಂಡ್ ಟಿ, ಥಿಯೋರಾಮ್ ಕಂಪನಿ, ಕಾಫಿ ಕ್ಯೂರಿಂಗ್, ಮಾಂಡೋವಿ ಮೋಟಾರ್ಸ್, ಸಾಯಿ ಗಾರ್ಮೆಂಟ್ಸ್, ಪ್ಯಾಲೇಸ್ ಟೊಯೋಟಾ, ಟ್ರಿಟೆಂಟ್ ಅಟೋ ಮೊಬೈಲ್, ಭಾರತ ಸುಜುಕಿ, ಟಾಟಾ ಸ್ಕೈ ಲಿ, ಪ್ರೇರಣಾ ಮೋಟಾರ್ಸ್, ಓರಿಯಂಟ್ ಬೆಲ್, ಮತ್ತಿತರ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ ಎಂದು ಅವರು ತಿಳಿಸಿದರು.
ಕೌಶಲ್ಯ ಅಭಿವೃದ್ಧಿ, ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾ ಗಣಪತಿ, ಸಹಾಯಕ ಸಾಂಖ್ಯಿಕ ಅಧಿಕಾರಿ ಡಾ.ಎಚ್.ಜೆ.ರೂಪ, ಜಿಲ್ಲಾ ಸಂಯೋಜಕ ಎನ್.ಆರ್.ರವಿಕುಮಾರ್, ಡಿವೈಎಸ್‍ಪಿ ಗಜೇಂದ್ರ ಪ್ರಸಾದ್, ಜಿ.ಪಂ.ಯೋಜನಾ ನಿರ್ದೇಶಕ ಜಗದೀಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಶಿವಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ.ಶೇಖ್, ಜಿ.ಪಂ.ಎಂಜಿನಿಯರ್ ಶ್ರೀಕಂಠಯ್ಯ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ಐಟಿಡಿಪಿ ಇಲಾಖೆ ಅಧಿಕಾರಿ ಹೊನ್ನೇಗೌಡ, ಸಾಂಖ್ಯಿಕ ಅಧಿಕಾರಿ ನಾರಾಯಣ ಮತ್ತಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!