ಕಾಂಗ್ರೆಸ್ ಜತೆ ಸಾಯುವುದಕ್ಕಿಂತ ಇಲ್ಲಿ ಸೇರಿ: ಪ್ರಧಾನಿ ಮೋದಿ ಕೊಟ್ರು ಸಲಹೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಂಗ್ರೆಸ್ ಜತೆ ಸಾಯುವುದಕ್ಕಿಂತ ಏಕನಾಥ್ ಶಿಂದೆ ಮತ್ತು ಅಜಿತ್ ಪವಾರ್ ಅವರೊಂದಿಗೆ ಸೇರಿಕೊಳ್ಳಿ ಎಂದು ಎನ್‌ಸಿಪಿ (ಶರದ್‌ ಪವಾರ್ ಬಣ) ಮತ್ತು ಶಿವಸೇನಾಗೆ (ಯುಬಿಟಿ) ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಲಹೆ ನೀಡಿದ್ದಾರೆ.

ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಮುಂದಿನ ಕೆಲ ವರ್ಷಗಳಲ್ಲಿ ಹಲವು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ನೊಂದಿಗೆ ಹೆಚ್ಚು ಗುರುತಿಸಿಕೊಳ್ಳಲಿವೆ ಅಥವಾ ತಮಗೆ ಉತ್ತಮ ಎನಿಸಿದರೆ ಅವು ಕಾಂಗ್ರೆಸ್‌ನೊಂದಿಗೆ ವಿಲೀನವಾಗುವ ಆಯ್ಕೆಯನ್ನೂ ಪರಿಗಣಿಸಬಹುದು ಎಂದು ಶರದ್ ಪವಾರ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದರು.

40-50 ವರ್ಷಗಳಿಂದ ಸಕ್ರಿಯರಾಗಿರುವ ಹಿರಿಯ ನಾಯಕರೊಬ್ಬರು ಬಾರಾಮತಿ ಕ್ಷೇತ್ರದಲ್ಲಿ ಮತದಾನದ ಬಳಿಕ ಚಿಂತೆಗೊಳಗಾಗಿದ್ದು, ಜೂನ್ ನಾಲ್ಕರ ನಂತರ ಸಣ್ಣ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಜತೆ ವಿಲೀನಗೊಳ್ಳಲಿವೆ ಎಂದಿದ್ದಾರೆ. ಅದರ ಅರ್ಥ ನಕಲಿ ಎನ್‌ಸಿಪಿ ಮತ್ತು ಶಿವಸೇನಾ ಪಕ್ಷಗಳು ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿವೆ’ ಎಂದು ಹೇಳಿದರು.

ಶಿವಸೇನಾ (ಯುಬಿಟಿ) ಮುಖಂಡ ಸಂಜಯ್ ರಾವುತ್ ಆಡಿದ್ದಾರೆ ಎನ್ನಲಾದ ‘ಮೊಘಲ್ ದೊರೆ ಔರಂಗಜೇಬ್‌ನಂತೆ ಮೋದಿ ಅವರನ್ನು ಮಹಾರಾಷ್ಟ್ರದಲ್ಲಿ ಹೂಳುತ್ತೇವೆ’ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಪ್ರಧಾನಿ, ‘ನಕಲಿ ಶಿವಸೇನಾದವರು ನನ್ನನ್ನು ಜೀವಂತವಾಗಿ ಹೂಳುವ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಜನರ ಬೆಂಬಲ ಕಳೆದುಕೊಂಡಿದ್ದಾರೆ ಮತ್ತು ಅವರ ರಾಜಕೀಯ ಅಂತ್ಯ ಸಮೀಪಿಸಿದೆ. ಭಾರತದ ಜನರೇ ನನಗೆ ಶ್ರೀರಕ್ಷೆ. ಅವರು ನನ್ನನ್ನು ಜೀವಂತವಾಗಿ ಸಮಾಧಿ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!