ನೇಣುಬಿಗಿದ ಸ್ಥಿಯಲ್ಲಿ ಜಡ್ಜ್ ಪತ್ನಿ ಪತ್ತೆ: ಸ್ಥಳದಲ್ಲಿತ್ತು ಮೂರು ಸೂಸೈಡ್ ನೋಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರ ಪತ್ನಿ ದಕ್ಷಿಣ ದೆಹಲಿಯ ರಾಜ್‌ಪುರ ಪ್ರದೇಶದಲ್ಲಿರುವ ತನ್ನ ಸಹೋದರನ ಮನೆಯಲ್ಲಿ ಫ್ಯಾನ್​ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
42 ವರ್ಷದ ಈ ಮಹಿಳೆ ಇಲ್ಲಿನ ಸಾಕೇತ್ ಕೋರ್ಟ್‌ನಲ್ಲಿ ಜಡ್ಜ್​ ಆಗಿದ್ದರು. ಅಲ್ಲದೇ, ಇವರ ಪತಿ ಅಶೋಕ್ ಬೇನಿವಾಲ್ ಕೂಡ ನ್ಯಾಯಾಧೀಶರಾಗಿದ್ದಾರೆ. ಸಾಕೇತ್ ಕೋರ್ಟ್​​ ವಸತಿ ನಿಲಯದಲ್ಲಿ ಈ ದಂಪತಿ ವಾಸಿಸುತ್ತಿದ್ದರು.

ಮೇ 27ರಂದು ಬೆಳಗ್ಗೆ 11.30ರ ಸುಮಾರಿಗೆ ಮಾಳವೀಯ ನಗರ ಮಾರುಕಟ್ಟೆಗೆ ಹೋಗಿದ್ದ ಅವರು ಮರಳಿ ಮನೆಗೆ ಬಂದಿರಲಿಲ್ಲ. ಹೀಗಾಗಿ, ಅಂದು ರಾತ್ರಿಯೇ 10.30ಕ್ಕೆ ಪೊಲೀಸ್ ಠಾಣೆಗೆ ನ್ಯಾ.ಅಶೋಕ್ ಬೇನಿವಾಲ್ ದೂರು ನೀಡಿದ್ದರು. ಅಂತೆಯೇ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಇವರ ಪತ್ತೆಗಾಗಿ ಮನೆಯ ಸುತ್ತ-ಮುತ್ತಲಿನ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದ್ದರು. ಒಂದು ಸಿಸಿ ಕ್ಯಾಮೆರಾದಲ್ಲಿ ಆಟೋ ದಾಖಲಾಗಿತ್ತು. ಅಲ್ಲಿಂದ ಇದರ ಜಾಡು ಹಿಡಿದ ಪೊಲೀಸರು ಆಟೋ ಚಾಲಕನನ್ನು ಪತ್ತೆ ಹಚ್ಚಿಸಿದ್ದರು. ಅಲ್ಲದೇ, ಕಾಣೆಯಾದ ಮಹಿಳಾ ನ್ಯಾಯಾಧೀಶೆಯನ್ನು ಮೈದಾನ್ ಗರ್ಹಿ ಪ್ರದೇಶದ ರಾಜ್‌ಪುರದಲ್ಲಿ ಬಿಟ್ಟಿರುವುದಾಗಿ ಆಟೋ ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.

ನಂತರ ನ್ಯಾ.ಅಶೋಕ್ ಬೇನಿವಾಲ್ ಅವರನ್ನು ಸಂಪರ್ಕಿಸಿದ ಪೊಲೀಸರು, ರಾಜ್‌ಪುರದಲ್ಲಿ ಯಾರಿದ್ದಾರೆ ಎಂದು ಕೇಳಿದಾಗ ಅಲ್ಲಿ ಸಂಬಂಧಿಕರು ವಾಸಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು. ಬಳಿಕ ನ್ಯಾಯಾಧೀಶರೊಂದಿಗೆ ಪೊಲೀಸ್ ತಂಡ ರಾಜ್​ಪುರಕ್ಕೆ ಭೇಟಿ ನೀಡಿದಾಗ ಮನೆ ಒಳಗಿನಿಂದ ಬೀಗ ಹಾಕಿರುವುದು ಕಂಡು ಬಂದಿದೆ.

ಬಾಗಿಲು ಮುರಿದು ಒಳಗಡೆ ಹೋದಾಗ ಮಹಿಳಾ ನ್ಯಾಯಾಧೀಶರ ಶವವು ದುಪಟ್ಟಾದಿಂದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜೊತೆಗೆ ಸ್ಥಳದಲ್ಲಿ ಮೂರು ಡೆತ್​ನೋಟುಗಳು ಸಹ ದೊರೆತಿವೆ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಮೃತದೇಹವನ್ನು ಏಮ್ಸ್‌ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!