120 ದಿನದ ಒಳಗೆ ನ್ಯಾಯ ಕೊಡಿಸ್ತೀವಿ: ನೇಹಾ ತಂದೆಗೆ ಸಿಎಂ ಸಿದ್ಧರಾಮಯ್ಯ ಭರವಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಾಂಗ್ರೆಸ್‌ ಕಾರ್ಪೋರೇಟರ್‌ ನಿರಂಜನ್‌ ಹೀರೇಮಠ್‌ ಅವರ ಪುತ್ರಿ ನೇಹಾ ಹೀರೇಮಠ್‌ ಅವರ ಮನೆಗೆ ಸಿಎಂ ಸಿದ್ಧರಾಮಯ್ಯ ಗುರುವಾರ ಭೇಟಿ ನೀಡಿದರು.

ಈ ವೇಳೆ ನೇಹಾ ತಂದೆ ತಾಯಿ ನಿರಂಜನ ಹಿರೇಮಠ ತಾಯಿ ಗೀತಾರಿಗೆ ಸಿಎಂ ಸಾಂತ್ವನ ಹೇಳಿದ್ದಾರೆ.

ಇದೊಂದು ಘೋರವಾದ ಘಟನೆ. ಇದರಿಂದ ನನಗೆ ಬಹಳ ನೋವಾಗಿದೆ. ಈಗಾಗಲೇ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಇದರಲ್ಲಿ ಮತ್ತೆ ರಾಜಕೀಯ ಮಾಡಲು ಹೋಗೋದಿಲ್ಲ. ಈ ತಂದೆ-ತಾಯಿಗೆ ಧೈರ್ಯ ಹೇಳಲು ಬಂದಿದ್ದೇನೆ. ದೇವರು ಅವರಿಗೆ ಧೈರ್ಯ ನೀಡಲಿ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ನಿರಂಜನ ಹಿರೇಮಠ ಕೈಹಿಡಿದು ಸಿಎಂ ಸಂತೈಸಿದ್ದು, ಹುಬ್ಬಳ್ಳಿಯ ನೇಹಾ ಕುಟುಂಬದ ಜೊತೆಗೆ ನಾವಿದ್ದೇವೆ . ಎಲ್ಲ ಮಗ್ಗಲುಗಳಲ್ಲಿಯೂ ತನಿಖೆ ಮಾಡಲು ಸೂಚಿಸಿದ್ದೇನೆ. ಇದೊಂದು ದುರದೃಷ್ಟ ಘಟನೆ. ಸಿಐಡಿಗೆ ಕೊಟ್ಟಿದ್ದೇವೆ. ಆರೋಪಿಯನ್ನು ಬಂಧಿಸಿದ್ದೇವೆ. ಸಿಐಡಿ ತನಿಖೆ ಆರಂಭಗೊಂಡಿದೆ ಎಂದು ಹೇಳಿದರು.

ಸಿಬಿಐ ಕೊಡಬೇಕು ಅನ್ನೋ ಬಿಜೆಪಿ ಬೇಡಿಕೆ ವಿಚಾರದ ಬಗ್ಗೆಯೂ ಮಾತನಾಡಿದ ಅವರು, ಬಿಜೆಪಿ ರಾಜಕೀಯ ಮಾಡುತ್ತಿದೆ. ಒಂದು ಪ್ರಕರಣವನ್ನಾದರೂ ಅವರು ಸಿಬಿಐಗೆ ಕೊಟ್ಟಿದ್ದಾರಾ? ನಮ್ಮ ಅವಧಿಯಲ್ಲಿ ಸಾಕಷ್ಟು ಪ್ರಕರಣಗಳನ್ನು ಸಿಬಿಐ ಗೆಕೊಟ್ಟಿದ್ದೆವು. ಬಿಜೆಪಿ ಅಧಿಕಾರದಲ್ಲಿದ್ದಾಗ ಸಾಕಷ್ಟು ಘಟನೆಗಳಾಗಿವೆ. ಒಂದೇ ಒಂದು ಪ್ರಕರಣ ಅವರು ಸಿಬಿಐಗೆ ಕೊಟ್ಟಿಲ್ಲ. ನೇಹಾ ಕುಟುಂಬದ ಜೊತೆಗೆ ನಾವಿರುತ್ತೇವೆ. ಅವರಿಗೆ ರಕ್ಷಣೆ ಬೇಕಿದ್ದರೆ ಕೊಡುತ್ತೇವೆ . ಸಿಐಡಿ ಅಧಿಕಾರಿಗಳು ತನಿಖೆ ಮಾಡ್ತಾರೆ. ವಿಶೇಷ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸುತ್ತಾರೆ. ನಂತರ ಕೋರ್ಟ್ ನಲ್ಲಿ ಟ್ರಯಲ್ ನಡೆಯುತ್ತೆ. ಆದಷ್ಟು ಬೇಗ ನ್ಯಾಯಾಲಯದಲ್ಲಿ ಗರಿಷ್ಠ ಶಿಕ್ಷೆ ಆಗುತ್ತೆ. ಧೈರ್ಯವಾಗಿ ಇರಿ. 120 ದಿನದ ಒಳಗೆ ನ್ಯಾಯ ಕೊಡಿಸೋಣ ಎಂದು ನಿರಂಜನ್ ಹಿರೇಮಠ್ ಅವರ ಬೆನ್ನು ತಟ್ಟಿ ಸಿಎಂ ಸಂತೈಸಿದ್ದಾರೆ.

ಈ ವೇಳೆ ನಿರಂಜನ್‌ ಹೀರೇಮಠ್‌ ಸಿಎಂಗೆ ಕ್ಷಮಿಸಿ ಎಂದು ಮನವಿಯನ್ನೂ ಮಾಡಿದರು. ಘಟನೆ ನಡೆದಾಗ ದುಃಖದಲ್ಲಿ ಹೇಳಿಕೆ ನೀಡಿದ್ದೆ. ಯಾರನ್ನೂ ನೋಯಿಸುವ ಉದ್ದೇಶ ಇರಲಿಲ್ಲ. ಮಗಳ ಸಾವಿಗೆ ನ್ಯಾಯ ಸಿಗಬೇಕು. ಪಕ್ಷಾತೀತವಾಗಿ ಎಲ್ಲರು ಬೆಂಬಲಸಿದ್ದಾರೆ. ಮುಖ್ಯಮಂತ್ರಿಗಳು ನಮ್ಮ ಬೇಡಿಕೆಯಂತೆ ತ್ವರಿತ ನ್ಯಾಯಾಲಯ ಸ್ಥಾಪಿಸಿ, ಪ್ರಕರಣ ಸಿಐಡಿಗೆ ವಹಿಸಿದ್ದಾರೆ ಎಂದು ಹೇಳಿದರು.

ಸಿಎಂಗೆ ಸಚಿವ ಸಂತೋಷ ಲಾಡ್, ಎಚ್ ಕೆ ಪಾಟೀಲ್, ಶಾಸಕರುಗಳಾದ ಪ್ರಸಾದ್ ಅಬ್ಬಯ್ಯ,ಎನ್ ಎಚ್ ಕೋನರೆಡ್ಡಿ ಸಾಥ್‌ ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!