Monday, November 28, 2022

Latest Posts

ದಸರಾ ಪ್ರಾಧಿಕಾರ ರಚಿಸಲು ಕೆ.ಮಹೇಶ್ ಕಾಮತ್ ಆಗ್ರಹ

ಹೊಸದಿಗಂತ ವರದಿ, ಮೈಸೂರು
ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಇನ್ನಷ್ಟು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ನಡೆಸುವುದಕ್ಕಾಗಿ ಸರ್ಕಾರ ಕೂಡಲೇ ದಸರಾ ಪ್ರಾಧಿಕಾರವನ್ನು ರಚಿಸಬೇಕು ಎಂದು ಹೋಟೆಲ್ ಉದ್ಯಮಿ ಹಾಗೂ ಬಿಜೆಪಿ ಮುಖಂಡ ಕೆ.ಮಹೇಶ್ ಕಾಮತ್ ಆಗ್ರಹಿಸಿದ್ದಾರೆ.
ಪ್ರತೀ ಬಾರಿಯೂ ಮೈಸೂರು ದಸರಾ ಮಹೋತ್ಸವವು ಕೊನೆ ಕ್ಷಣದಲ್ಲಿ ತೀರ್ಮಾನಿಸಿ ರೂಪು ರೇಷೆಗೊಳ್ಳುತ್ತದೆ. ಇದರಿಂದಾಗಿ ಗೊಂದಲ, ಅವ್ಯವಸ್ಥೆಯಾಗುತ್ತಿದೆ. ದೇಶ, ವಿದೇಶ ಮಟ್ಟದಲ್ಲೂ ದಸರಾಗೆ ಸರಿಯಾದ ಪ್ರಚಾರ ಸಿಗುತ್ತಿಲ್ಲ. ಪ್ರವಾಸಿಗರಿಗೆ ದಸರಾದಲ್ಲಿ ಏನೇನು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂಬ ಮಾಹಿತಿ ಇರುವುದಿಲ್ಲ. ಹೀಗಾಗಿ ಅವರು ಮೈಸೂರಿಗೆ ದಸರಾ ನೋಡಲೆಂದು ಪೂರ್ವ ತಯಾರಿ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಪ್ರತಿ ಬಾರಿಯೂ ಹೇಳಿದಂತೆ ಸರ್ಕಾರ ದಸರಾ ಪ್ರಾಧಿಕಾರ ರಚಿಸುವುದಾಗಿ ಹೇಳುತ್ತಲೇ ಬರುತ್ತಿದೆ. ಆದರೆ ಕಾರ್ಯರೂಪಕ್ಕೆ ಬಂದಿಲ್ಲ, ಈಗಲಾದರೂ ಎಲ್ಲಾ ಕ್ಷೇತ್ರದವರನ್ನು ಒಳಗೊಂಡಂತೆ ಪ್ರಾಧಿಕಾರ ರಚನೆಯಾದರೆ ಇನ್ನೂ ಉತ್ತಮ ರೀತಿಯಿಂದ ಶಿಸ್ತು ಬದ್ದವಾಗಿ ನಡೆಸಬಹುದು ಎಂಬುವುದು ನಮ್ಮೆಲ್ಲರ ಒಕ್ಕೊರಲಿನ ಒತ್ತಾಯವಾಗಿದೆ ಎಂದು ತಿಳಿಸಿದ್ದಾರೆ.
ದಸರಾ ಹಬ್ಬಕ್ಕೆ ಪ್ರವಾಸಿಗರಿಗೆ ಹೆಚ್ಚಿನ ಒತ್ತನ್ನು ಕೊಡಬೇಕು. ದಸರಾ ಗೋಲ್ಡ್ ಕಾರ್ಡ್ ಬಿಡುಗಡೆಯಾಗಿ ಕೇವಲ ಒಂದು ಗಂಟೆಯಲ್ಲಿ ಖಾಲಿ ಎಂದು ಕೇಳಿದಾಗ ಬಹಳ ದುಖಃವಾಯಿತು. ಇದ್ದನ್ನು ಯಾವುದಾದರೂ ರಾಜಕಾರಣಿಗಳೇ ಖರೀದಿಸಿ, ಅವರ ಅನುಯಾಯಿಗೆ ಕೊಟ್ಟಿರಬಹುದೇ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಅದೇ ರೀತಿ ಪಾಸ್‌ಗಳು ಸಹ ಪ್ರವಾಸಿಗರಿಗೆ ದೊರೆಯುತ್ತಿಲ್ಲ. ಅದರ ಬಗ್ಗೆಯೂ ಜನ ಈ ಎಲ್ಲಾ ಪಾಸ್ ಗಳನ್ನು ಯಾವುದಾದರೂ ರಾಜಕಾರಣಿಗಳು ಅವರ ಹಿಂಬಾಲಕರಿಗಾಗಿ ಮೀಸಲಿಟ್ಟರೇ ಎಂಬಂತಾಗಬಾರದು ಎಂಬುದು ನಮ್ಮ ಅಭಿಪ್ರಾಯವಾಗಿದೆ. ಎಲ್ಲಾ ಕಾರ್ಯಕ್ರಮದಲ್ಲೂ ಸಹ ಪಕ್ಷದ ಕಾರ್ಯಕರ್ತರೇ ತುಂಬುತ್ತಿರುವುದು ಜನರ ಉಹಾ ಪೋಹಗಳಿಗೆ ಕಾರಣವಾಗುತ್ತಿದೆ. ಇದಕ್ಕೆ ತೆರೆ ಎಳೆಯಲು ಖಾಯಂ ದಸರಾ ಪ್ರಾದಿಕಾರ ರಚಿಸಿದರೆ ಆನ್ ಲೈನ್ ಮೂಲಕ ಗೋಲ್ಡ ಕಾರ್ಡ್ ಸಿಗುವಂತ್ತಾಗುತ್ತದೆ. ಇದರಿಂದ ಪ್ರವಾಸಿಗರು ಕಣ್ತುಂಬ ಜಂಬೂ ಸವಾರಿಯನ್ನು ನೋಡಬಹುದು. ಇದರಿಂದ ರಾಜಕಾರಣಿಗಳ ಬಗ್ಗೆಯೂ ಇಲ್ಲ ಸಲ್ಲದ ಆರೋಪವೂ ಬರುವುದಿಲ್ಲ ಮತ್ತು ಪ್ರವಾಸಿಗರಿಗೂ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಾಂತಾಗುತ್ತದೆ. ಸರಿಯಾಗಿ ಯೋಜನೆ ಮಾಡಿ, ಸರಿ ಸುಮಾರು 2 ತಿಂಗಳ ಮುಂಚೆಯೇ ಕಾರ್ಯಕ್ರಮದ ಬಗ್ಗೆ ರೂಪು ರೇಷೆ ಕೈಗೊಳ್ಳಲು ಸಹಕಾರವಾಗುತ್ತದೆ. ಇದರಿಂದ ಮೈಸೂರಿನ ಹೆಸರು ಮತ್ತಷ್ಟು ಉನ್ನತಕ್ಕೇರಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರಿಯಾಗಿ ಪ್ಲಾನ್ ಮಾಡಿ, ಪೂರ್ವಭಾವಿಯಾಗಿ ಸಾಕಷ್ಟು ತಯಾರಿಯನ್ನು ಮಾಡಿಕೊಂಡು, ಯೋಜಿತವಾಗಿ ಸಾಕಷ್ಟು ಮುಂಚಿತವಾಗಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ದಸರಾ ಕಾರ್ಯಕ್ರಮಗಳ ಬಗ್ಗೆ ನಿರಂತರವಾಗಿ, ವ್ಯಾಪಕವಾಗಿ ಪ್ರಚಾರ ನೀಡಿದರೆ, ಲಕ್ಷಾಂತರ ಮಂದಿ ದೇಶಿ, ವಿದೇಶಿ ಪ್ರವಾಸಿಗರು ಮೈಸೂರಿಗೆ ಬಂದು 10-15 ದಿನಗಳ ಕಾಲ ಉಳಿದುಕೊಳ್ಳುವುದರಿಂದ ಪ್ರವಾಸೋದ್ಯಮ ಇನ್ನಷ್ಟು ಬೆಳೆದು ನಿರುದ್ಯೋಗ ಸಮಸ್ಯೆಯೂ ಹೋಗಲಾಡಲಿದೆ. ಹಾಗಾಗಿ ಈ ಬಗ್ಗೆ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!