ಕಾರ್ಯಾಚರಣೆ ವೇಳೆ ಕುಸಿದು ಬಿದ್ದು ಕಾಡಾನೆ ಸಾವು!

ಹೊಸದಿಗಂತ ವರದಿ,ಸುಂಟಿಕೊಪ್ಪ:

ಕಾಡಾನೆ ಹಿಡಿಯುವ ಕಾರ್ಯಾಚರಣೆ ವೇಳೆ ಆನೆಯೊಂದು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕುಶಾಲನಗರ ತಾಲೂಕಿನ ಚೆಟ್ಟಳ್ಳಿ ಸಮೀಪದ ಅತ್ತೂರು-ನಲ್ಲೂರು ಗ್ರಾಮದ ಮುತ್ತಣ್ಣ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಶುಕ್ರವಾರ ನಡೆದಿದೆ.
ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಮುಂಜಾನೆಯೇ ಕಾರ್ಯಾಚರಣೆಗೆ ಸಜ್ಜಾದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾಕಾನೆಗಳ ಸಹಾಯದಿಂದ ಕಾಡಾನೆ ಸೆರೆಗೆ ಮುಂದಾದರು. ಬೆಳಗ್ಗೆ 9 ಗಂಟೆ ವೇಳೆಗೆ ಕಾಡಾನೆಗಳ ಗುಂಪು ಇರುವುದು ಗೋಚರಿಸಿತು. ಜನರ ಮೇಲೆ ದಾಳಿ ಇಡಲು ಮುಂದಾಗಿದ್ದ ಅಂದಾಜು 15 ವರ್ಷ ಪ್ರಾಯದ ಗಂಡಾನೆಗೆ ಅರಿವಳಿಕೆ ತಜ್ಞ ಕುಮಾರ್ ಅವರು ಅರಿವಳಿಕೆ ನೀಡುವಲ್ಲಿ ಯಶಸ್ವಿಯಾದರು.
ಅರಿವಳಿಕೆ ಚುಚ್ಚುಮದ್ದು ಮೈಗೆ ಬೀಳುತ್ತಿದ್ದಂತೆ ರಭಸದಿಂದ ಓಡಿದ ಕಾಡಾನೆ ಇಳಿಜಾರಿನ ಪ್ರದೇಶದಲ್ಲಿದ್ದ ಕಾಫಿ ಒಣಗಿಸುವ ಕಣಕ್ಕೆ ಪ್ರಜ್ಞೆ ತಪ್ಪಿ ಉರುಳಿಬಿತ್ತು.
ನಂತರ ಸ್ಥಳಕ್ಕೆ ಸಾಕಾನೆಗಳನ್ನು ಕರೆತಂದು, ಕಾಡಾನೆಗೆ ಎಚ್ಚರವಾಗಲು ಚುಚ್ಚುಮದ್ದು ನೀಡಲಾಯಿತಾದರೂ, ನೋವಿನಿಂದ ನರಳಾಡುತ್ತಿದ್ದ ಕಾಡಾನೆ ಹೇಗೋ ಎದ್ದು ನಿಂತಿತ್ತು. ನಂತರ ಹಗ್ಗದ ಸಹಾಯದ ಮೂಲಕ ಸಾಕಾನೆಗಳು ಕಾಡಾನೆಯನ್ನು ಎಳೆದೊಯ್ದವು. ಆದರೆ ನೂರು ಮೀಟರ್ ಹೋಗುತ್ತಿದ್ದಂತೆ ಕಾಡಾನೆ ಕುಸಿದು ಬಿತ್ತು. ಈ ವೇಳೆ ಪರಿಶೀಲನೆ ಮಾಡಿದ ಸಂದರ್ಭ ಕಾಡಾನೆ ಮೃತಪಟ್ಟಿತ್ತು.
ಸೆರೆ ಹಿಡಿಯುವ ವೇಳೆ ಮೃತಪಟ್ಟ ಕಾಡಾನೆಯ ಕಳೇಬರವನ್ನು ಲಾರಿಯಲ್ಲಿ ಮೀನುಕೊಲ್ಲಿ ಅರಣ್ಯಕ್ಕೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಈ ಸಂದರ್ಭ ಡಿಎಫ್ಒ ಪೂವಯ್ಯ, ಅರಣ್ಯಾಧಿಕಾರಿಗಳಾದ ರಂಜನ್, ಗೋಪಾಲ್ ಮತ್ತಿತರರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!