ಸಾಕಾನೆ ಶಿಬಿರಕ್ಕೆ ಕಾಡಾನೆ ದಾಳಿ: ದುಬಾರೆ ಪ್ರವಾಸಿ ತಾಣ ತಾತ್ಕಾಲಿಕ ಬಂದ್!

ಹೊಸದಿಗಂತ ವರದಿ,ಮಡಿಕೇರಿ:

ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾದ ದುಬಾರೆ ಸಾಕಾನೆ ಶಿಬಿರಕ್ಕೆ ಕಾಡಾನೆ ಲಗ್ಗೆ ಇಟ್ಟು ಸಾಕಾನೆಯ ಮೇಲೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ದುಬಾರೆ ಶಿಬಿರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಕಾಡಾನೆ ದಾಳಿಯಿಂದಾಗಿ ಸಾರ್ವಜನಿಕರಲ್ಲಿ ಇನ್ನಿಲ್ಲದ ಆತಂಕ ಸೃಷ್ಟಿಯಾಗಿದ್ದು, ಕಾಡಾನೆಯನ್ನು ಅರಣ್ಯಕ್ಕೆ
ಓಡಿಸುವ ಕೆಲಸದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯೋನುಖರಾಗಿದ್ದಾರೆ.
ಕಾಡಿನಿಂದ ನಾಡಿಗೆ ಬರುತ್ತಿದ್ದ ಕಾಡಾನೆಗಳು, ಬೆಳೆಗಳನ್ನು ತಿಂದು, ತುಳಿದು ತೆರಳುತ್ತಿದ್ದವು. ಆದರೆ, ಇದೀಗ ಸಾಕಾನೆ ಶಿಬಿರಕ್ಕೆ ಲಗ್ಗೆಯಿಟ್ಟಿರುವ ಕಾಡಾನೆಗಳು, ಸಾಕಾನೆ ಮೇಲೆ ದಾಳಿ ನಡೆಸಿರುವುದು ಪ್ರವಾಸಿಗರು ಮತ್ತು ಸ್ಥಳೀಯರಲ್ಲಿ ಇನ್ನಷ್ಟು ಆತಂಕವನ್ನು ಸೃಷ್ಟಿಸಿದೆ.
ಸಮೀಪದ ಮೀಸಲು ಅರಣ್ಯದಿಂದ ಬಂದಿರುವ ಕಾಡಾನೆ ಯನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆಯು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಮಡಿಕೇರಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ, ಕುಶಾಲನಗರ ವಲಯ ಅರಣ್ಯ ಅಧಿಕಾರಿ ಕೆ.ಎ.ಶಿವರಾಮ್ ನೇತೃತ್ವದಲ್ಲಿ ಕಾಡಾನೆಯನ್ನು ಅರಣ್ಯದತ್ತ ಓಡಿಸುವ ಕೆಲಸ ನಡೆಯುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಉಪ ವಲಯ ಅರಣ್ಯ ಅಧಿಕಾರಿ ರಂಜನ್ ಮತ್ತು ಸಿಬ್ಬಂದಿ ಪಟಾಕಿ ಸಿಡಿಸುವ ಮೂಲಕ ಕಾಡಾನೆಯನ್ನು ಕಾಡಿಗಟ್ಟಲು ಯತ್ನಿಸಿದ್ದಾರೆ.
ಮುಂದಿನ ಆದೇಶದವರೆಗೆ ಬಂದ್: ಸಾರ್ವಜನಿಕರ ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ದುಬಾರೆ ಸಾಕಾನೆ ಶಿಬಿರಕ್ಕೆ ಮುಂದಿನ ಆದೇಶದವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಕಾಡಾನೆಯನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಕಾರ್ಯಾಚರಣೆಯ ನಂತರ ದುಬಾರೆಯನ್ನು ತೆರೆಯಲಾಗುತ್ತದೆ ಎಂದು ವಲಯ ಅರಣ್ಯ ಅಧಿಕಾರಿ
ಕೆ.ವಿ.ಶಿವರಾಮ್ ತಿಳಿಸಿದ್ದಾರೆ.
ದಸರಾ ಆನೆ ಗೋಪಿಗೆ ಚಿಕಿತ್ಸೆ: ದುಬಾರೆ ಶಿಬಿರದಲ್ಲಿದ್ದ ಗೋಪಿ ಎಂಬ ಸಾಕಾನೆ ಮೇಲೆ ಕಾಡಾನೆ ಮಾಡಿದ್ದು, ಗಂಭೀರವಾಗಿ ಗಾಯವಾಗಿದೆ. ವನ್ಯಜೀವಿ ತಜ್ಞ ಡಾ.ಚಿಟ್ಟಿಯಪ್ಪ ನೇತೃತ್ವದ ತಂಡ ತೀವ್ರ ಸ್ವರೂಪದಲ್ಲಿ ಗಾಯಗೊಂಡ ಶಿಬಿರದ ಆನೆಗೆ ಚಿಕಿತ್ಸೆ ನೀಡುತ್ತಿದ್ದು, ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗೋಪಿ ಇದೀಗ ಚೇತರಿಸಿಕೊಳ್ಳುತ್ತಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರವಾಸೋದ್ಯಮ ಅವಲಂಬಿತರಿಗೆ ನಷ್ಟ: ಪ್ರಕೃತಿ ವಿಕೋಪ, ಕೋವಿಡ್’ನಿಂದಾಗಿ ಕೊಡಗಿನಲ್ಲಿ ನೆಲಕಚ್ಚಿದ್ದ ಪ್ರವಾಸೋದ್ಯಮ ಇತ್ತೀಚೆಗಷ್ಟೇ ಚೇತರಿಸಿಕೊಳ್ಳಲಾರಂಭಿಸಿದೆ. ಪ್ರವಾಸಿಗರು ಕೊಡಗಿಗೆ ಆಗಮಿಸುತ್ತಿರುವ ಸಮಯದಲ್ಲೇ ದುಬಾರೆ ಸಾಕಾನೆ ಶಿಬಿರದ ಮೇಲೆ ಕಾಡಾನೆ ದಾಳಿ ನಡೆಸಿ ಶಿಬಿರ ಬಂದ್ ಆಗಿರುವುದರಿಂದ ಪ್ರವಾಸೋದ್ಯಮ ಅವಲಂಬಿತರಿಗೆ
ನಷ್ಟವಾಗಲಿದೆ. ಕಾಡಾನೆಯನ್ನು ಓಡಿಸುವ ಕಾರ್ಯಾಚರಣೆಯನ್ನು ತ್ವರಿತಗೊಳಿಸಿ, ದುಬಾರೆಯನ್ನು ಆದಷ್ಟು ಶೀಘ್ರ ಪ್ರವಾಸಿಗರಿಗೆ ತೆರೆಯಲು ಅವಕಾಶ ಮಾಡಿಕೊಡಬೇಕಾಗಿದೆ ಎಂದು ಅಲ್ಲಿನ ವರ್ತಕರು ಒತ್ತಾಯಿಸಿದ್ದಾರೆ.
ಕಾಡಾನೆಗಳ ದಾಳಿಯಿಂದ ಕೊಡಗಿನ ಜನತೆ ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಕಾಡಾನೆಗಳ ಸಮಸ್ಯೆಗಳಿಗೆ ಸ್ಥಳೀಯ ಶಾಸಕರು ಹಾಗೂ ಸರ್ಕಾರ, ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!